ಕರ್ನಾಟಕದಲ್ಲಿ ಅಕ್ಟೋಬರ್‌ 21ರಿಂದ ಬಿಸಿಯೂಟ ಪುನರಾರಂಭ

ಬೆಂಗಳೂರು: ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಿದ್ದ ಬಿಸಿಯೂಟ ಕಾರ್ಯಕ್ರಮವನ್ನು ಅಕ್ಟೋಬರ್ 21ರಿಂದ ಪುನರಾರಂಭಿಸಲಾಗುತ್ತಿದೆ.
ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ್ದು, 2021ರ ಅ.21ರಿಂದ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಪುನರಾರಂಭಿಸಲು ಸೂಚನೆ ನೀಡಿದೆ.
ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ, ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ಕೊಡಲಾಗಿದೆ.
ಶಾಲೆಗಳಲ್ಲಿ ಅಡುಗೆ ತಯಾರು ಮಾಡುವ ಆಹಾರ ಧಾನ್ಯಗಳ ದಾಸ್ತಾನುಗಳನ್ನು ಪರಿಶೀಲಿಸಿಕೊಳ್ಳಬೇಕು. ಅವಧಿ ಮೀರಿರುವ ಆಹಾರ ಧಾನ್ಯಗಳನ್ನು ಬಳಕೆ ಮಾಡದಂತೆ, ಗ್ಯಾಸ್‍ಸ್ಟೌವ್ ಮತ್ತು ಪಾತ್ರೆ ಪರಿಕರಗಳ ದುರಸ್ತಿ ಮಾಡಿಸಲು ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾನವನ್ನು (ರೂ.5 ಸಾವಿರದಿಂದ 8 ಸಾವಿರ ರೂ.ಗಳ ಒಳಗೆ) ನಿಯಮಾನುಸಾರ ಬಳಕೆ ಮಾಡಿಕೊಂಡು ದುರಸ್ತಿ ಮಾಡಿಸುವಂತೆ ತಿಳಿಸಲಾಗಿದೆ.
ಶಾಲೆಯ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸುವುದು. ಆಹಾರ ದಾಸ್ತಾನು ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು, ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಅಗತ್ಯ ಕ್ರಮ ವಹಿಸುವುದು. ಅಡುಗೆ ಸಿಬ್ಬಂದಿ ವೈಯುಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.
ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ -19 ಸಾಂಕ್ರಾಮಿಕ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಎರಡು ಡೋಸ್ ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡಿರಬೇಕು. ಶಾಲಾ ವಿದ್ಯಾರ್ಥಿಗಳು ಕೈತೊಳೆಯಲು ನೀರಿನ ವ್ಯವಸ್ಥೆಯೊಂದಿಗೆ ಹ್ಯಾಂಡ್ ವಾಷಿಂಗ್ ಯುನಿಟ್‍ಗಳನ್ನು ದುರಸ್ತಿ ಮಾಡಿಸಿ ಸ್ವಚ್ಛವಾಗಿಟ್ಟು ಪ್ರತಿನಿತ್ಯ ಕೈತೊಳೆಯಲು ಉಪಯೋಗಿಸುವುದು. ಶಾಲಾ ಸಿಬ್ಬಂದಿ ಕಾಲಕಾಲಕ್ಕೆ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿರುವುದನ್ನು ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
2021ರ ಅಕ್ಟೋಬರ್ 21ರೊಳಗೆ ಶಾಲೆಗಳಿಗೆ ಅಕ್ಕಿ ಮತ್ತು ಗೋಧಿ ಸರಬರಾಜಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರವನ್ನು ನೀಡಲು ಉಳಿದ ಆಹಾರ ಪದಾರ್ಥಗಳನ್ನು 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 4.97 ರೂ.ಗಳಂತೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 7.45 ರೂ.ಗಳ ಪರಿವರ್ತನಾ ವೆಚ್ಚವನ್ನು ಬಳಸಿಕೊಂಡು ಅಡುಗೆ ತಯಾರಿಸುವಂತೆ ಸೂಚನೆ ನೀಡಲಾಗಿದೆ. ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಮುಖ್ಯ ಹಾಗೂ ಸಹಾಯಕ ಅಡುಗೆಯವರು ಕಡ್ಡಾಯವಾಗಿ 2021ರ ಅ.21ರೊಳಗೆ ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡು ಅಡುಗೆ ಕೇಂದ್ರಗಳಿಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಅ.21ರಿಂದ ಮಧ್ಯಾಹ್ನದ ಉಪಅಹಾರವನ್ನು ವಿದ್ಯಾರ್ಥಿಗಳಿಗೆ ನೀಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲು ಕ್ಷೇತ್ರ ಶಿಕ್ಷಣಾಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement