ಡ್ರಗ್ಸ್ ಪ್ರಕರಣ : ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಮೊಬೈಲ್, ಲ್ಯಾಪ್ ಟಾಪ್ ವಶಕ್ಕೆ ಪಡೆದ ಎನ್ ಸಿಬಿ

ಮುಂಬೈ: ಡ್ರಗ್ಸ್ ಪ್ರಕರಣ ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿದ್ದು, ಶಾರುಖ್ ಖಾನ್ ಮಗ ಆರ್ಯನ್‌ ಖಾನ್‌ ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾದ ಬಳಿಕ ಇತರ ಸೆಲೆಬ್ರಿಟಿಗಳನ್ನು ಈಗ ಈ ಡ್ರಗ್ಸ್ ಪ್ರಕರಣ ಸುತ್ತಿಕೊಳ್ಳುತ್ತಿದೆ. ಈ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ನಿವಾಸದ ಮೇಲೆ ಎನ್‌ಸಿಬಿ ಗುರುವಾರ ದಾಳಿ ನಡೆಸಿ ಶೋಧ ನಡೆಸಿತು.
ಈ ಸಂದರ್ಭದಲ್ಲಿ ಅನನ್ಯಾ ಪಾಂಡೆಗೆ ಸೇರಿವೆ ಎನ್ನಲಾದ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ ಎಂದು ಟಿವಿ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ ಗುರುವಾರ ಮಧ್ಯಾಹ್ನ ಮುಂಬೈನ ಎನ್‌ಸಿಬಿ ಕಚೇರಿಯಲ್ಲಿ ಅನನ್ಯಾ ಪಾಂಡೆ ಅವರ ವಿಚಾರಣೆ ನಡೆಸಲಾಯಿತು. ಅನನ್ಯಾ ಪಾಂಡೆ ಅವರು ತಮ್ಮ ತಂದೆ, ಬಾಲಿವುಡ್‌ ನಟ ಚಂಕಿ ಪಾಂಡೆಯೊಂದಿಗೆ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ತೆರಳಿದರು.
ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರ್ಯನ್ ಖಾನ್ ಅವರಿಗೆ ಇನ್ನೂ ಜಾಮೀನು ಲಭಿಸಿಲ್ಲ. ಎರಡು ಬಾರಿ ನ್ಯಾಯಾಲಯ ಜಾಮೀನು ಆರ್ಜಿ ವಜಾಗೊಳಿಸಿದೆ. ಆರ್ಯನ್‌ ವಿರುದ್ಧ ಬಲವಾದ ಪುರಾವೆಗಳಿವೆ. ಜಾಮೀನು ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ವಿಶೇಷ ಕೋರ್ಟ್‌ ಆದೇಶದಲ್ಲಿ ಹೇಳಿದೆ. ಈಗ ಆರ್ಯನ್ ಖಾನ್ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದು, ಅಕ್ಟೋಬರ್ 26ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ