ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ

ಬೆಂಗಳೂರು : ನಮ್ಮ ಮೆಟ್ರೋ, ಟ್ರಾಫಿಕ್‌ ಟ್ರಾಫಿಕ್‌ ತೊಂದರೆಯಲ್ಲಿ ಸಿಲುಕಿ ತತ್ತರಿಸಿದ್ದ ಜನರಿಗೆ ಅದರಿಂದ ಮುಕ್ತಿ ನೀಡಲು ರಾಜ್ಯ ಸರ್ಕಾರವು ಕೇಂದ್ರದ ಸಹಕಾರದಿಂದ ಆರಂಭಿಸಿದ ಯೋಜನೆಯಾಗಿದ್ದು ಇದಕ್ಕೆ ಈಗ ದಶಕದ ಸಂಭ್ರಮ.
ಬೆಂಗಳೂರಿನ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಮೆಟ್ರೊದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 60 ಕೋಟಿ ಜನರು ಪ್ರಯಾಣ ಬೆಳೆಸಿದ್ದು, 1286.6 ಕೋಟಿ ರೂ. ಆದಾಯ ಬಂದಿದೆ.
ಭಾರತ ಸರಕಾರ, ಕರ್ನಾಟಕ ಸರಕಾರ ಹಾಗೂ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ನ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಲ್ಲಿ 2011ರ ಅಕ್ಟೋಬರ್‌ 20 ರಂದು ಕಾರ್ಯಾರಂಭ ಮಾಡಿದ್ದ ನಮ್ಮ ಮೆಟ್ರೋ ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದೆ. ಅಂದು ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರು ಇದಕ್ಕೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಎಂ.ಜಿ.ರಸ್ತೆಯಿಂದ ಬೈಯ್ಯಪ್ಪನಹಳ್ಳಿಯ ವರೆಗಿನ ಸುಮಾರು 6 ಕಿ.ಮೀ. ಉದ್ದದ ರಸ್ತೆಯಲ್ಲಿ ಕಾರ್ಯಾರಂಭ ಮಾಡಿದ್ದ ಮೆಟ್ರೋ ಇಂದು 56.1 ಕಿ.ಮೀ. ವರೆಗೆ ಕಾರ್ಯನಿರ್ವಹಿಸುತ್ತಿದೆ.
ಇದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿದೆ. ಕೊರೊನಾ ಸಂಕಷ್ಟ ಎದುರಾಗುವ ಮುನ್ನ ನಿತ್ಯವೂ 5.25 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಕೊರೊನಾ ಸಂಕಷ್ಟದ ನಂತರದಲ್ಲಿ ನಿತ್ಯದ ಪ್ರಯಾಣಿಕರ ಸಂಖ್ಯೆ 2.12ಲಕ್ಷಕ್ಕೆ ಇಳಿಕೆಯಾಗಿತ್ತು. ಈಗ ನಿತ್ಯ 2.70 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಬೆಂಗಳೂರಿನ ಹಲವೆಡೆ ಸುರಂಗದ ಮೂಲಕ ಮೆಟ್ರೋ ಸಂಚಾರ ಮಾಡುತ್ತಿದ್ದು, ದಕ್ಷಿಣ ಭಾರತದ ಮೊದಲ ಭೂಗತ ಮೆಟ್ರೋ ವ್ಯವಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ.
ನಮ್ಮ ಮೆಟ್ರೋ ಯೋಜನೆಯನ್ನು ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಎಲ್ಲೆಡೆ ವಿಸ್ತರಿಸುವ ಯೋಜನೆ ಇದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯನ್ನು ರಾಜ್ಯ ಸರಕಾರ ಕೈಗೊಂಡಿದೆ.ಮೆಟ್ರೋದ ಮುಖ್ಯ ನಿಲ್ದಾಣವಾಗಿರುವ ಕೆಂಪೇಗೌಡ ಮೆಟ್ರೋ ನಿಲ್ಡಾಣಕ್ಕೆ ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆಯಿದೆ. ಜಯದೇವ ಆಸ್ಪತ್ರೆ ಬಳಿ ಏಷ್ಯಾದಲ್ಲಿಯೇ ಅತೀ ಎತ್ತರದ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement