ಮನೆಮನೆಗೆ ಪೂರೈಸುವ ಗಿಫ್ಟ್ ಬಾಕ್ಸ್‌ನಲ್ಲಿ ಡ್ರಗ್ಸ್ ಪೂರೈಕೆ; ಇಬ್ಬರ ಬಂಧನ

posted in: ರಾಜ್ಯ | 0

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಡಾರ್ಕ್ ನೆಟ್‌ನಲ್ಲಿ ಮಾದಕ ವಸ್ತುಗಳನ್ನು ಖರೀದಿಸಿ ಮನೆ ಮನೆಗೆ ಸ್ವಿಗ್ಗಿ ಡಂಜೋ ಹೆಸರಿನಲ್ಲಿ ಗ್ರಾಹಕರಿಗೆ ಗಿಫ್ಟ್ ಬಾಕ್ಸ್‌ಗಳಲ್ಲಿ ತಲುಪಿಸುತ್ತಿದ್ದ ಹೊಸ ವಿಧಾನದ ಬೃಹತ್ ಡ್ರಗ್ಸ್ ಸರಬರಾಜು ಮಾರಾಟ ಜಾಲವನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಭೇದಿಸಿದ್ದಾರೆ.
ಬೃಹತ್ ಜಾಲದಲ್ಲಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ಅವರಿಂದ ೬೦ ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಲ್ಳಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಜಾರ್ಖಂಡ್ ಮೂಲದ ಹಾಲಿ ಬೆಳ್ಳಂದೂರು ವಾಸಿಗಳಾದ ರವಿ (೩೪) ಹಾಗೂ ರವಿದಾಸ್ ಅಲಿಯಾಸ್ ರವಿಪ್ರಕಾಶ್ (೩೫) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ೩೦೦ ಎಂಡಿಎಂಎ ಎಕ್ಸೆಟೆಸಿ ಮಾತ್ರೆಗಳು, ೧೦೦ ಎಲ್ ಎಸ್ ಡಿ ಪೇಪರ್ ಬ್ಲಾಟ್ಸ್, ೩೫೦ ಗ್ರಾಂ ಚರಸ್, ೧.೫ ಕೆ ಜಿ ಹೈಡೋ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಗಿಫ್ಟ್ ಬಾಕ್ಸ್, ಪ್ಯಾಕಿಂಗ್ ಕವರ್ ಗಳು, ಸಿಗ್ಗಿ ಕಂಪನಿಯ ಟೀ ಶರ್ಟ್, ಡಂಝೇ ಬ್ಯಾಗ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹೊಸ ಹೊಸ ವಿಧಾನದಲ್ಲಿ ಮಾದಕ ವಸ್ತುಗಳನ್ನು ನಗರಕ್ಕೆ ತರುತ್ತಿದ್ದು ಈ ಮಾರ್ಗವನ್ನು ಪತ್ತೆಹಚ್ಚಿದ್ದಾರೆ. ಹೀಗಾಗಿ ಜಾಲ ಪತ್ತೆಹಚ್ಚಿದ ಸಿಸಿಬಿಯ ತಂಡಕ್ಕೆ ೬೦ ಸಾವಿರ ರೂ ಬಹುಮಾನ ನೀಡುವುದಾಗಿಅವರು ತಿಳಿಸಿದರು.

ಡಾರ್ಕ್ ನೆಟ್ ನಲ್ಲಿ ಬಿಟ್ ಕಾಯಿನ್ ಬಳಸಿ ವಿದೇಶದಿಂದ ದೆಹಲಿಗೆ ಡ್ರಗ್ಸ್ ತರಿಸಿ ಸ್ಥಳೀಯ ಡ್ರಗ್ಸ್ ಪೆಡ್ಲರ್ ಗಳಿಂದ ಮಾದಕ ದ್ರವ್ಯಗಳನ್ನು ಬಿಟ್ ಕಾಯಿನ್ ಮೂಲಕ ಖರೀದಿಸಿಸುತ್ತಿದ್ದ ಆರೋಪಿಗಳು ಬೆಂಗಳೂರು ನಗರ ಗ್ರಾಹಕರಿಂದ ಮಾದಕ ದ್ರವ್ಯ ಪದಾರ್ಥಗಳನ್ನು ಆರ್ಡರ್ ತೆಗೆದುಕೊಂಡು ಸ್ವಿಗ್ಗಿ, ಜಿನೈನ್ ಡಂಜೋ ಪುಸ್ತಕ ಇನ್ನಿತರ ಉಡುಗೊರೆ ಬಾಕ್ಸ್ ಮುಖಾಂತರ ಬರ್ಥ್ ಡೇ ಗಿಫ್ಟ್ ಪ್ಯಾಕ್‌ಗಳಲ್ಲಿ ಗ್ರಾಹಕರ ಮನೆಗಳಿಗೆ ಸರಬರಾಜು ಮಾಡುತ್ತಿದ್ದರು.
ವೈಟ್ ಫೀಲ್ಡ್‌ನಲ್ಲಿ ಡ್ರಗ್ಸ್ ಜಾಲ ಬೇಧಿಸಿ ಒಂದೂವರೆ ಕೋಟಿ ರೂ.ಗಳ ಮಾದಕವಸ್ತುಗಳನ್ನು ವಶಪಡಿಸಿಕೊಂಡು ತನಿಖೆಯನ್ನು ಮುಂದುವರೆಸಿ ಇನ್ನಿಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದರು.
ಹೈಡೋ ಗಾಂಜಾ ವಶ:
ಬಂಧಿತ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳು ಬೆಳ್ಳಂದೂರು ಪೊಲೀಸ್ ಠಾಣೆ ಪಿಜಿಯೊಂದರಲ್ಲಿ ಎಂಡಿಎಂಎ ಎಕ್ಸೆಟೆಸಿ ಮಾತ್ರೆಗಳು, ಎಲ್‌ಎಸ್‌ಡಿ ಪೇಪರ್ ಬ್ಲಾಟ್ಸ್, ಚರಸ್, ಹೈಡೋ ಗಾಂಜಾವನ್ನು ಶೇಖರಿಸಿಕೊಂಡು ನಗರದಲ್ಲಿ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂದರು.
ಬಂಧಿತ ಆರೋಪಿಗಳು ತಮ್ಮ ಮಾಲೀಕನಾದ ದೆಹಲಿ ಮೂಲದ ವ್ಯಕ್ತಿಗೆ ಮೊಬೈಲ್‌ ಅಪ್ಲಿಕೇಷನ್‌ಗಳಲ್ಲಿ ಮೆಸೇಜ್ ಮತ್ತು ಕರೆಗಳನ್ನು ಮಾಡಿ ಮಾತನಾಡುತ್ತಿದ್ದರು. ಆತ ಕೂರಿಯರ್ ಮೂಲಕ ಆರೋಪಿಗಳ ವಿಳಾಸಕ್ಕೆ ಅವುಗಳನ್ನು ರವಾನಿಸುತ್ತಿದ್ದ ಎಂದು ಮಾಹಿತಿ ನೀಡಿದರು.
ಆರೋಪಿಗಳು ಕೋರಿಕೆಯ ಅನುಸಾರವಾಗಿ ಪ್ರತ್ಯೇಕವಾಗಿ ಸೋಪ್‌ಗಳ ಜೊತೆ, ಪೋಟೋಗಳ ಜೊತೆ, ಗ್ರೀಟಿಂಗ್ ಕಾರ್ಡ, ಪುಸ್ತಕಗಳ ಪುಟಗಳ ಮಧ್ಯೆ ಇಟ್ಟು, ಬರ್ತ್ಡೇ ಗಿಫ್ಟ್ ರಾಪರ್‌ಗಳಲ್ಲಿ ಪ್ಯಾಕ್ ಕಳುಹಿಸುತ್ತಿದ್ದರು ಎಂದರು.
ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿದ್ದರು. ಡಿಸಿಪಿ ಅಪರಾಧ ಬಿ ಎಸ್ ಅಂಗಡಿ ರವರ ನೇತೃತ್ವದಲ್ಲಿ ಎಸಿಪಿ ಕೆ ಸಿ ಗೌತಮ್, ಪಿಐ ಬಿ ಎಸ್ ಅಶೋಕ್, ದೀಪಕ್ ಆರ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ