ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಮಿಕಸ್‌ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಆದೇಶಿಸಿದ ಹೈಕೋರ್ಟ್‌

ಬೆಂಗಳೂರು: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್‌ ಕ್ಯೂರಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.
ಅಮಿಕಸ್‌ ಕ್ಯೂರಿ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು ಎಂದು ಹೇಳಿದೆ. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಹೇಳಿದೆ.
ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಒಳಗೊಂಡ ಅಫಿಡವಿಟ್‌ ಅನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ್ದು, ದಿನದಂತ್ಯಕ್ಕೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಈ ಪಟ್ಟಿಯನ್ನು ಅಮಿಕಸ್‌ ಕ್ಯೂರಿಗೂ ರಾಜ್ಯ ಸರ್ಕಾರ ನೀಡಬೇಕು. ಇದನ್ನು ಅಮಿಕಸ್‌ ಕ್ಯೂರಿ ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ
ವಿಚಾರಣೆ ಆರಂಭವಾಗುತ್ತಿದ್ದಂತೆ ಅಮಿಕಸ್‌ ಕ್ಯೂರಿ ಹಿರಿಯ ವಕೀಲರಾದ ಆದಿತ್ಯ ಸೋಂಧಿ “ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪೆಸಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಫಿಡವಿಟ್‌ ಸಲ್ಲಿಸಬೇಕು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ಹಿಂಪಡೆಯುವ ರಾಜ್ಯ ಸರ್ಕಾರದ ಆದೇಶ ಮತ್ತು ಮ್ಯಾಜಿಸ್ಟ್ರೇಟ್‌ ಆದೇಶಗಳನ್ನು ಹೈಕೋರ್ಟ್‌ ಪರಿಶೀಲಿಸಬಹುದಾಗಿದೆ” ಎಂದು ನ್ಯಾಯಾಲಯದ ಗಮನ ಸೆಳೆದರು ಎಂದು ವರದಿ ಹೇಳಿದೆ.
ವಾದ-ಪ್ರತಿವಾದಿ ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 17ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement