ಯಕ್ಷರಂಗದ ಗೋಡೆ, ನಾರಾಯಣ ಹೆಗಡೆಗೆ ಅನಂತ ಶ್ರೀ ಪ್ರಶಸ್ತಿ ಪ್ರಕಟ

ಶಿರಸಿ: ಬಡಗುತಿಟ್ಟು ಯಕ್ಷಗಾನದ ಮೇರು‌ ಕಲಾವಿದ ಯಕ್ಷರಂಗದ ಗೋಡೆ ಎಂದೇ ಖ್ಯಾತರಾದ ಗೋಡೆ ನಾರಾಯಣ ಹೆಗಡೆ ಅವರಿಗೆ‌ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನದ ಖ್ಯಾತ ಭಾಗ್ವತ ಕೇಶವ ಹೆಗಡೆ ಕೊಳಗಿ, ಖ್ಯಾತ ತಾಳಮದ್ದಳೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ ಇಂದು (ಶುಕ್ರವಾರ) ಪತ್ರಿಕಾಗೋಷ್ಠೀಯಲ್ಲಿ ಈ ವಿಷಯ ಪ್ರಕಟಿಸಿದರು ಹಾಗೂ ಗೋಡೆ ಅವರು ಯಕ್ಷಗಾನಕ್ಕೆ ಮಾಡಿದ ಅನನ್ಯ ಕೊಡುಗೆ ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.ಪ್ರಶಸ್ತಿ ಪ್ರದಾನ: ಯಕ್ಷಗಾನದ‌ ಮೇರು ಕಲಾವಿದ, ಆರು ದಶಕಗಳಿಗೂ ಅಧಿಕ ಕಾಲದಿಂದ‌ ಅನವರತ ಯಕ್ಷಗಾನಕ್ಕಾಗಿ ದುಡಿದ, ಪಾತ್ರಕ್ಕೆ ಜೀವ ತುಂಬಿದ, ರಂಗದಲ್ಲಿ ಸಾವಿರಕ್ಕೂ ಅಧಿಕ ಕೌರವನ ಪಾತ್ರ ನಿರ್ವಹಿಸಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಅನಂತ ಶ್ರೀ ಪ್ರಶಸ್ತಿ‌ ಪ್ರದಾನ‌ ಮಾಡಲಾಗುತ್ತಿದೆ. ನಾಲ್ಕು ದಶಕಗಳ ಕಾಲ ಪ್ರಮುಖ ಕಲಾವಿದರಾಗಿ ಹೆಸರು ಮಾಡಿದ್ದ ಕೊಳಗಿ ಅನಂತ ಹೆಗಡೆ ಅವರ ‌ನೆನಪಿನ‌ ಪ್ರಶಸ್ತಿ ಇದಾಗಿದ್ದು, ಈ ಇಬ್ಬರೂ ಕಲಾವಿದರು ಒಟ್ಟಾಗಿ‌ ಪಾತ್ರದ ಮೂಲಕ ರಂಗದಲ್ಲಿ ರಂಜಿಸಿದ್ದರು ಎಂದು ಅವರು ಹೇಳಿದರು.
ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾ‌ನ ದಶಮಾನೋತ್ಸವ ಕಾರ್ಯಕ್ರಮವೂ ಈ ಸಂದರ್ಭದಲ್ಲಿ ನಡೆಯಲಿದೆ.
ಕಳೆದ ಹನ್ನೆರಡು ವರ್ಷಗಳ ಹಿಂದೆ ಯಕ್ಷಗಾನ ಹಾಗೂ ಕಲೆಗಳ ಸಂರಕ್ಷಣೆ ಕುರಿತು ಸಮಾನಾಸಕ್ತರು ಸೇರಿ ರಚಿಸಿಕೊಂಡ ಹಿರಿಯ ಕಲಾವಿದರಾಗಿ ಅಗಲಿದ ಅನಂತ ಹೆಗಡೆ ಅವರ ಹೆಸರಿನ ಸಂಸ್ಥೆಯ ದಶಮಾನೋತ್ಸವ ಆಚರಣೆಯನ್ನು ಕೋವಿಡ್ ಸಾಂಕ್ರಾಮಿಕ ಸೋಂಕಿನ ಕಾರಣದಿಂದ ಆಚರಿಸಿಕೊಳ್ಳಲು ವಿಳಂಬ ಆಗಿದೆ. ಈ ಬಾರಿ‌ ಶಿರಸಿಯಲ್ಲಿ ದಶಮಾನೋತ್ಸವವನ್ನು ನಗರದ ಟಿಎಂಎಸ್ ಸಭಾಂಗಣದಲ್ಲಿ ಅ.೩೧ರ ಮಧ್ಯಾಹ್ನ ೩:೩೦ರಿಂದ ನಡೆಯಲಿದೆ ಎಂದರು.
ಅಂದಿನ ಸಮಾರಂಭದಲ್ಲಿ ೩:೩೦ಕ್ಕೆ ಪ್ರಸಿದ್ಧ ಕೊಳಲು ವಾದಕ ಪ್ರಕಾಶ ಹೆಗಡೆ‌ ಕಲ್ಲಾರೆಮನೆ, ತಬಲಾದಲ್ಲಿ ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ, ಹಾರ್ಮೋನಿಯಂದಲ್ಲಿ ಭರತ ಹೆಬ್ಬಲಸು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
೪:೪೫ಕ್ಕೆ ಪ್ರಶಸ್ತಿ‌‌ ಪ್ರದಾನ ಕಾರ್ಯಕ್ರಮವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ‌ ಕಾಗೇರಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು ನಾರಾಯಣ ಹೆಗಡೆ ಗೋಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿ.ಉಮಾಕಾಂತ ಭಟ್ಟ ಅಭಿನಂದನಾ‌ ಮಾತುಗಳನ್ನು ಆಡಲಿದ್ದಾರೆ ಎಂದು ತಿಳಿಸಿದರು.
ಚಲನಚಿತ್ರದ ನಿರ್ದೇಶಕ ಬೆಂಗಳೂರಿನ ನಾಗತಿಹಳ್ಳಿ ಚಂದ್ರಶೇಖರ, ಪ್ರಜಾವಾಣಿ‌ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಸಂಕಲ್ಪದ ಪ್ರಮೋದ ಹೆಗಡೆ, ಎಪಿಐಟಿ ಸಂಸ್ಥೆಯ ಮುಖ್ಯಸ್ಥ ಶಶಿಕುಮಾರ ತಿಮ್ಮಯ್ಯ, ಸಹಕಾರಿ ಆರ್.ಎಂ.ಹೆಗಡೆ ಬಾಳೆಸರ, ಶಂಕರಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ, ಸೆಲ್ಕೋ ಸಿಇಓ ಮೋಹ‌ನ ಹೆಗಡೆ ಹೆರವಟ್ಟಾ, ಪ್ರೊ. ಜಿ.ಎಲ್.ಹೆಗಡೆ‌ ಕುಮಟಾ, ಉದ್ಯಮಿಗಳಾದ ರಾಜಶೇಖರ ಹಂದೆ ನೈಜೇರಿಯಾ, ಆರ್.ಜಿ.ಭಟ್ಟ ವರ್ಗಾಸರ ಪಾಲ್ಗೊಳ್ಳಿದ್ದಾರೆ. ಸಂಸ್ಥೆ ಅಧ್ಯಕ್ಷ ವಿ.ಎಂ.ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ.
ಬಳಿಕ ಕಂಸ ದಿಗ್ವಿಜಯ, ಕಂಸ ವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

 

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement