ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿಯೂ ಕೃತಕ ಕಾಲು ತೆಗೆಸುವ ಸಿಬ್ಬಂದಿ: ಸುಧಾ ಚಂದ್ರನ್ ಕ್ಷಮೆಯಾಚಿಸಿದ ಸಿಐಎಸ್‌ಎಫ್

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಶುಕ್ರವಾರ ನಟಿ ಹಾಗೂ ಭರತನಾಟ್ಯ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಅವರ ಕೃತಕ ಕಾಲನ್ನು ಬಿಚ್ಚಿ ತೋರಿಸುವಂತೆ ಸೂಚಿಸುವ ಮೂಲಕ ಅವಮಾನ ಮಾಡಲಾಗಿತ್ತು ಎಂದು ಸುಧಾ ಚಂದ್ರನ್‌ ಹೇಳಿದ್ದರು ಹಾಗೂ ಈ ಕುರಿತು ಪ್ರಧಾನಿ ಹಾಗೂ ಸರ್ಕಾರಕ್ಕೂ ಮನವಿ ಮಾಡಿದ್ದರು. ಅಲ್ಲದೆ, ಅಲ್ಲದೆ ಇನ್ಸ್ಟಾಗ್ರಾಮ ವಿಡಿಯೋಕ್ಕೆ ಪ್ರಧಾನಿ ಮೋದಿ ಅವನ್ನೂ ಟ್ಯಾಗ್‌ ಮಾಡಿದ್ದರು. ಈಗ ಈ ಸಂಬಂಧ ಸಿಐಎಸ್‌ಎಫ್ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ.
ಸುಧಾ ಚಂದ್ರನ್ ಅವರಿಗೆ ಉಂಟಾದ ಅನನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಪ್ರೋಟೋಕಾಲ್ ಪ್ರಕಾರ, ವಿಶೇಷ ಸಂದರ್ಭಗಳಲ್ಲಿ ಮಾತ್ರ ಭದ್ರತಾ ತಪಾಸಣೆಗಾಗಿ ಪ್ರಾಸ್ಥೆಟಿಕ್ಸ್ ಅನ್ನು ತೆಗೆದು ತಪಾಸಣೆ ಮಾಡಲಾಗುತ್ತದೆ. ಪ್ರಾಸ್ಥೆಟಿಕ್ಸ್ ಅನ್ನು ತೆಗೆಯಲು ಸಂಬಂಧಿಸಿದ ಮಹಿಳಾ ಸಿಬ್ಬಂದಿ ಸುಧಾ ಚಂದ್ರನ್ ಅವರನ್ನು ಏಕೆ ವಿನಂತಿಸಿದರು ಎಂಬುದನ್ನು ನಾವು ಪರಿಶೀಲಿಸುತ್ತೇವೆ ಎಂದು ಸಿಐಎಸ್‌ಎಫ್ ಹೇಳಿದ್ದು,
ಪ್ರೋಟೋಕಾಲ್‌ ಪಾಲಿಸುವ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ನಮ್ಮ ಎಲ್ಲ ಸಿಬ್ಬಂದಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುವುದು ಎಂದು ನಾವು ಸುಧಾ ಚಂದ್ರನ್‌ ಅವರಿಗೆ ಭರವಸೆ ನೀಡುತ್ತೇವೆ” ಎಂದು ಟ್ವೀಟ್ ಮಾಡಿದೆ.
ಇದಕ್ಕೂ ಮೊದಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ಉದ್ದೇಶದಿಂದ ತಮ್ಮ ಕೃತಕ ಕಾಲುಗಳನ್ನು ಪ್ರತಿ ಬಾರಿ ಬಿಚ್ಚಿ ತೋರಿಸಲು ಹೇಳುತ್ತಾರೆ. ಇದು ನನಗೆ ಬಹಳ ನೋವಾಗುತ್ತದೆ ಎಂದು ಸುಧಾ ಚಂದ್ರನ್‌ ಹೇಳಿಕೊಂಡಿದ್ದರು. ಈ ಕುರಿತು ವಿಡಿಯೋದಲ್ಲಿ ಮಾತನಾಡಿದ್ದ ಅವರು, ”ಇದು ಅತ್ಯಂತ ವೈಯಕ್ತಿಕ ವಿಷಯವಾದರೂ, ಸರ್ಕಾರಕ್ಕೆ ಹಾಗೂ ನೆಚ್ಚಿನ ಪ್ರಧಾನಿಗಳ ಗಮನಕ್ಕೆ ತರುವ ಉದ್ದೇಶದಿಂದ ವಿಡಿಯೋ ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದರು.
ಕೃತಕ ಕಾಲುಗಳ ಮುಖಾಂತರ ನೃತ್ಯ ಮಾಡಿ ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದೇನೆ. ಆದರೆ ನಾನು ಕಾರ್ಯದ ನಿಮಿತ್ತ ಪ್ರತಿ ಬಾರಿ ವಿಮಾನ ನಿಲ್ದಾಣಗಳಿಗೆ ತೆರಳಿದಾಗಲೂ ಭದ್ರತಾ ತಂಡದವರು ನಿಲ್ಲಿಸುತ್ತಾರೆ. ಅವರಿಗೆ ನನ್ನ ಕೃತಕ ಕಾಲುಗಳನ್ನು ಇಟಿಡಿ (ಸ್ಫೋಟ ಪರಿಶೀಲನಾ ಸಾಧನ) ಮೂಲಕ ಪರಿಶೀಲನೆ ಮಾಡಿ ಎಂದು ಮನವಿ ಮಾಡಿಕೊಂಡರೂ, ಕೇಳದೆ ಪ್ರತಿ ಬಾರಿಯೂ ಕೃತಕ ಕಾಲನ್ನು ತೆಗೆಸಿಯೇ ಪರಿಶೀಲಿಸುತ್ತಾರೆ” ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement