ಕೋವಿಡ್‍ನಿಂದಾಗಿ 2 ವರ್ಷ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ: ಹೊಸ ಅಧ್ಯಯನದಲ್ಲಿ ಬೆಳಕಿಗೆ…!

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. 2019ಕ್ಕೆ ಹೋಲಿಸಿದರೇ 2020ಕ್ಕೆ ಭಾರತೀಯರ ಜೀವಿತಾವಧಿ ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ಹೇಳಿದೆ.
ಮುಂಬೈ ಮೂಲದ ಇಂಟರ್‌ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್‍ ಈ ಅಧ್ಯಯನ ನಡೆಸಿದೆ. 145 ರಾಷ್ಟ್ರಗಳ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಬಿಡಿ) ಅಧ್ಯಯನ ಮತ್ತು ಕೋವಿಡ್ ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (ಎಪಿಐ) ಪೋರ್ಟಲ್ ವಿಶ್ಲೇಷಣೆಗಾಗಿ ಸಂಗ್ರಹಿಸಿದ ಡೇಟಾವನ್ನು ಬಳಸಿ ಈ ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನದ ವರದಿಯು ಬಿಎಂಸಿ ಪಬ್ಲಿಕ್ ಹೆಲ್ತ್‌ನಲ್ಲಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು, ವರದಿಯಲ್ಲಿ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ವರದಿ ಬರೆದಿದ್ದಾರೆ. “2019 ರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿ ಪುರುಷರಿಗೆ 69.5 ವರ್ಷಗಳು ಮತ್ತು ಮಹಿಳೆಯರಿಗೆ 72 ವರ್ಷಗಳು ಇತ್ತು. ಇದು 2020 ರಲ್ಲಿ ಕ್ರಮವಾಗಿ 67.5 ವರ್ಷಗಳು ಮತ್ತು 69.8 ವರ್ಷಗಳಿಗೆ ಇಳಿದಿದೆ” ಎಂದು ವರದಿ ಹೇಳಿದೆ.
35-69 ವರ್ಷದ ನಡುವಿನ ಮಹಿಳೆಯರಲ್ಲಿ, 35-79 ವರ್ಷದ ಪುರುಷರಲ್ಲಿ ಕೊರೊನಾ ಹೆಚ್ಚು ಪತ್ತೆಯಾಗಿತ್ತು. ಕೊರೊನಾದಿಂದ ಈ ವಯೋಮಾನದ ಜನರು ಮೃತಪಟ್ಟರು. ಹೀಗಾಗಿ ಇದೇ ವಯೋಮಾನದ ಜನರ ಜೀವಿತಾವಧಿ ಕಡಿಮೆಯಾಗಿದೆ ಎನ್ನಲಾಗಿದೆ. ಇನ್ನು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಉತ್ತಮ ಎನ್ನಲಾಗಿದ್ದು ಅಮೆರಿಕಾ, ಇಂಗ್ಲೆಂಡ್ ಸೇರಿ ಹಲವು ದೇಶಗಳಲ್ಲಿ 2.28 ವರ್ಷಕ್ಕೆ ಜೀವಿತಾವಧಿ ಕುಸಿದಿದೆ ಎಂದು ವರದಿ ಹೇಳಿದೆ.
“ಪ್ರತಿ ಬಾರಿ ನಾವು ಕೆಲವು ಸಾಂಕ್ರಾಮಿಕ ರೋಗಗಳಿಂದ ಬಾಧಿತರಾಗುತ್ತೇವೆ, ಜೀವಿತಾವಧಿ ಕಡಿಮೆಯಾಗುತ್ತದೆ. ಉದಾಹರಣೆಗೆ, ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕದ ನಂತರ, ಜೀವಿತಾವಧಿ ಕಡಿಮೆಯಾಯಿತು. ಒಮ್ಮೆ ಅದನ್ನು ನಿಯಂತ್ರಣಕ್ಕೆ ತಂದ ನಂತರ ಜೀವಿತಾವಧಿಯೂ ಮರುಕಳಿಸಿತು ಎಂದು ಐಐಪಿಎಸ್ ನಿರ್ದೇಶಕ ಡಾ ಕೆಎಸ್ ಜೇಮ್ಸ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement