ಸಿರಿಯಾ: ಡ್ರೋಣ್ ದಾಳಿಯಲ್ಲಿ ಅಲ್‌ ಕೈದಾ ಉಗ್ರ ಸಂಘಟನೆ ಹಿರಿಯ ನಾಯಕನ ಹತ್ಯೆ ಮಾಡಿದ ಅಮೆರಿಕ

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್‌ ದಾಳಿಯಲ್ಲಿ ಅಲ್‌-ಕೈದಾ ಉಗ್ರ ಸಂಘಟನೆಯ ಹಿರಿಯ ನಾಯಕ ಹತ್ಯೆಯಾಗಿದ್ದಾನೆ ಎಂದು ಪೆಂಟಗಾನ್‌ ತಿಳಿಸಿದೆ.
ಇಸ್ಲಾಮಿಕ್‌ ಸ್ಟೇಟ್ ಸಂಘಟನೆ ವಿರುದ್ಧ ಹೋರಾಟ ನಡೆಸುತ್ತಿದ್ದ ಅಮೆರಿಕ ನೇತೃತ್ವದ ಸೇನಾ ಪಡೆಗಳು ಬಳಸುತ್ತಿದ್ದ ದಕ್ಷಿಣ ಸಿರಿಯಾದ ನೆಲೆಯ ಮೇಲೆ ಎರಡು ದಿನಗಳ ಹಿಂದಷ್ಟೇ ದಾಳಿ ನಡೆದಿತ್ತು.ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ.
ಸಿರಿಯಾದ ವಾಯವ್ಯ ಪ್ರದೇಶದಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಅಲ್‌-ಕೈದಾ ಹಿರಿಯ ನಾಯಕ ಅಬ್ದುಲ್‌ ಹಮೀದ್‌ ಅಲ್-ಮತರ್‌ ಹತ್ಯೆಯಾಗಿದ್ದಾನೆʼ ಎಂದು ಕೇಂದ್ರ ಕಮಾಂಡ್‌ನ ವಕ್ತಾರ, ಮೇಜರ್‌ ಜಾನ್‌ ರಿಗ್‌ಸ್ಬೀ ಹೇಳಿಕೆ ನೀಡಿದ್ದಾರೆ.
ಎಂಕ್ಯೂ-9 ವಿಮಾನ ಬಳಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿರುವ ರಿಗ್‌ಸ್ಬೀ, ಅಮೆರಿಕ ಹಾಗೂ ಮತ್ತದರ ಮಿತ್ರ ರಾಷ್ಟ್ರಗಳಿಗೆ ಅಲ್‌-ಕೈದಾ ಬೆದರಿಕೆ ಒಡ್ಡುತ್ತಲೇ ಇದೆ. ಸಂಘಟನೆಯನ್ನು ಪುನಃ ಕಟ್ಟಲು ಬಾಹ್ಯ ಕಾರ್ಯಾಚರಣೆಗಳಿಗೆ ಯೋಜನೆ ರೂಪಿಸಲು ಸಿರಿಯಾವನ್ನು ಸುರಕ್ಷಿತ ತಾಣವಾಗಿ ಬಳಸುತ್ತಿದೆʼ ಎಂದೂ ಹೇಳಿದ್ದಾರೆ.
ಸಂಘಟನೆಯ ಇನ್ನೊಬ್ಬ ನಾಯಕ ಸಲೀಂ ಅಬು-ಅಹ್ಮದ್‌ ಎಂಬಾತನನ್ನು ಅಮೆರಿಕ ಸೇನೆ ಸೆಪ್ಟೆಂಬರ್‌ ಅಂತ್ಯದಲ್ಲಿ ಹತ್ಯೆ ಮಾಡಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement