ನವದೆಹಲಿ: ಭಾರತದ ರಕ್ಷಣಾ ಇಲಾಖೆಯು ಅಮೆರಿಕದಿಂದ ಎಂಕೆ 54 ಟಾರ್ಪೆಡೊಗಳನ್ನು ಖರೀದಿಸಲು ₹ 423 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಕಳೆದ ಗುರುವಾರವೇ ಅಮೆರಿಕ ಸರ್ಕಾರದೊಂದಿಗೆ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಬ್ಮರೀನ್ ನಾಶಕ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಈ ಟಾರ್ಪೆಡೊಗಳು ನೆರವಾಗಲಿವೆ ಎಂದು ಹೇಳಲಾಗಿದೆ. ಇದನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗುತ್ತದೆ. ನೌಕಾಪಡೆಯ ಪಿ-81 ಸಾಗರ ಸರ್ವೇಕ್ಷಣಾ ವಿಮಾನಗಳಿಗೆ ಈ ಟಾರ್ಪೆಡೊಗಳನ್ನು ಅಳವಡಿಸಲಾಗುತ್ತದೆ. ಈ ಶಸ್ತ್ರದ ಉಪಯೋಗ ಮತ್ತು ಭಾರತೀಯ ನೌಕಾಪಡೆಗೆ ಇದರಿಂದ ಏನು ಅನುಕೂಲ ಎಂಬ ವಿವರ ಇಲ್ಲಿದೆ.
12.75 ಇಂಚಿನ (324 ಎಂಎಂ) ಈ ಹಗುರ ಟಾರ್ಪೆಡೊಗಳನ್ನು ಅಮೆರಿಕ ನೌಕಾಪಡೆಯು ಈಗಾಗಲೇ ಬಳಸುತ್ತಿದ್ದು, ಸಬ್ಮರಿನ್ಗಳ ದಾಳಿಯ ಸಂದರ್ಭದಲ್ಲಿ ಇವು ಅತ್ಯಂತ ಪರಿಣಾಮಕಾರಿ ಎಂದು ವಿಶ್ಲೇಷಿಸಲಾಗಿದೆ.
ಎಂಕೆ 54 ಟಾರ್ಪೆಡೊಗಳು ಆಳ ಸಮುದ್ರದ ಕಾರ್ಯಾಚರಣೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ. ವೈರಿ ದೇಶದ ನೌಕಾಪಡೆಗಳ ರಕ್ಷಣಾ ವ್ಯವಸ್ಥೆ ಸಕ್ರಿಯವಾಗಿದ್ದಾಗಲೂ ಸಾಗದಾಳದ ಗುರಿಗಳನ್ನು ಗುರುತಿಸಿ ಬೆನ್ನತ್ತಿ ನಾಶಪಡಿಸಬಲ್ಲದು. 608 ಪೌಂಡ್ (275 ಕೆಜಿ) ತೂಕದ ಈ ಟಾರ್ಪೆಡೊ 96.8 ಪೌಂಡ್ (44 ಕೆಜಿ) ತೂಕದ ಸಿಡಿತಲೆಯನ್ನು ಗುರಿಯತ್ತ ಮುಟ್ಟಿಸಬಲ್ಲದು.
ಸಬ್ಮರಿನ್ ನಾಶಕದ ವಿಮಾನ ಮತ್ತು ಹೆಲಿಕಾಪ್ಟರ್ಗಳಿಂದಲೂ ಈ ಟಾರ್ಪೆಡೊವನ್ನು ಉಡಾವಣೆ ಮಾಡಬಹುದಾಗಿದಾಗಿದೆ. ಪ್ರಸ್ತುತ ಅಮೆರಿಕ ಮತ್ತು ಆಸ್ಟ್ರೇಲಿಯಾ ನೌಕಾಪಡೆಗಳು ಎಂಕೆ 54 ಟಾರ್ಪೆಡೊಗಳನ್ನು ಬಳಸುತ್ತಿವೆ.
ಸಬ್ಮರಿನ್ ನಾಶಕ ಟಾರ್ಪೆಡೊಗಳನ್ನು ಖರೀದಿಸಲು ಮುಂದಾಗಿರುವ ಭಾರತ ಸರ್ಕಾರದ ಕ್ರಮದ ಹಿಂದೆ ಚೀನಾದಿಂದ ಒದಗಿ ಬರಬಹುದಾದದ ಸಾಗರದಲ್ಲಿನ ಭದ್ರತೆಯ ಅಪಾಯ ಎದುರಿಸಲು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಮಹಾಸಾಗರದಲ್ಲಿ ಹಲವು ಬಾರಿ ತನ್ನ ಶಕ್ತಿ ತೋರಿಸಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕಾಗಿ ಭಾರತವೂ ನೌಕಾಸೇನೆ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ.ಭಾರತಕ್ಕೆ ಟಾರ್ಪೆಡೊಗಳನ್ನು ಮಾರುವ ಮೂಲಕ ಚೀನಾಕ್ಕೆ ಎಚ್ಚರಿಕೆ ನೀಡಲು ಅಮೆರಿಕ ಮುಂದಾಗಿದೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ