ಕೆ.ಶ್ಯಾಮರಾವ್ ಪ್ರಶಸ್ತಿಗೆ ಭಾಜನ: ಪತ್ರಕರ್ತ ವಿಠ್ಠಲದಾಸ್ ಕಾಮತಗೆ ಧಾರವಾಡ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನ

ಹುಬ್ಬಳ್ಳಿ: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿಉತ್ತರ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡುವ ಅತ್ಯುನ್ನತ ಕೆ.ಶ್ಯಾಮರಾವ್ ಪ್ರಶಸ್ತಿಗೆ ಭಾಜನರಾದ ಹುಬ್ಬಳ್ಳಿ ಹೊಸದಿಗಂತ ದಿನಪತ್ರಿಕೆ ಶಾಖಾ ವ್ಯವಸ್ಥಾಪಕರಾದ ವಿಠ್ಠಲದಾಸ್ ಕಾಮತ್, ಪ್ರಜಾವಾಣಿ ಹುಬ್ಬಳ್ಳಿ ಶಾಖೆ ಸ್ಥಾನಿಕ ಸಂಪಾದಕರಾದ ರಷ್ಮಿ ಹಾಗೂ ಪತ್ರಿಕೋದ್ಯಮದೊಂದಿಗೆ ರಾಜಕೀಯಕ್ಕೆ ಪ್ರವೇಶ ಮಾಡಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಘೋರ್ಪಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯ ನಿರತ ಪತ್ರಕರ್ತರ ಸಂಘದ ಯಾವುದೇ ಸದಸ್ಯ ಮೃತಪಟ್ಟರೆ, ಮೃತರ ಕುಟುಂಬಕ್ಕೆ ಪರಿಹಾರಧನ ನಿಯಿಂದ ೨೫ಸಾವಿರ ರೂ. ಆರ್ಥಿಕ ಸಹಾಯ ನೀಡಲು ಸಂಘ ತೀರ್ಮಾನಿಸಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅವರು ಹೇಳಿದರು. ಪತ್ರಕರ್ತರಿಗೆ ಸೂರು, ವೈದ್ಯಕೀಯ ಸಹಕಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಸಂಘದಿಂದ ಮಾಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಮಾತನಾಡಿ, ಪತ್ರಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗುವುದೇ ಸಂಘದ ಉದ್ದೇಶ. ಈ ನಿಟ್ಟಿನಲಿ ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಅನೇಕ ಕಾರ್ಯಕ್ರಮಗಳ ಹಮ್ಮಿಕೊಂಡಿದ್ದು ಸಂತಸ ತಂದಿದೆ. ಅದರಂತೆ ಬರುವ ನವೆಂಬರ್ ತಿಂಗಳಲ್ಲಿ ಕಲಬುರಗಿಯಲ್ಲಿ ಪತ್ರಕರ್ತರ ೩೬ನೇ ರಾಜ್ಯಮಟ್ಟದ ಮಹಾಸಮ್ಮೇಳನ ನಡೆಯಲಿದೆ. ಕಲಬುರಗಿಯಲ್ಲಿ ೨೫ವರ್ಷಗಳ ಬಳಿಕ ಮಹಾ ಸಮ್ಮೇಳನ ನಡೆಯುತ್ತಿದ್ದು, ಧಾರವಾಡ ಸೇರಿದಂತೆ ಈಭಾಗದ ಎಲ್ಲ ಪತ್ರಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವ್ಯಾಸಂಗದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಒಟ್ಟು ೨೧ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ವಾರ್ಷಿಕ ವರದಿ ವಾಚಿಸಿದರು, ಉಪಾಧ್ಯಕ್ಷ ಗುರುರಾಜ ಹೂಗಾರ ಸ್ವಾಗತಿಸಿದರು. ಹಿಂದಿನ ಸಭೆಯ ನಡಾವಳಿಯನ್ನು ವಿರೇಶ ಹಂಡಗಿ ವಾಚಿಸಿದರು. ರಾಜ್ಯ ಸಮಿತಿ ಸದಸ್ಯಾರಾದ ಬರವರಾಜ ವಿಜಾಪುರ, ಲೋಚನೇಶ ಹೂಗಾರ, ಕಾರ್ಯದರ್ಶಿ ಕೃಷ್ಣಾ ದಿವಾಕರ್, ಬಾಬುರಾವ್ ಯಡ್ರಾವಿ, ಸೇರಿದಂತೆ ಆಡಳಿತ ಮಂಡಳಿಯವರು, ಮೊದಲಾದವರು ಇದ್ದರು. ಉಪಾಧ್ಯಕ್ಷ ಗಿರೀಶ ಪಟ್ಟಣಶೆಟ್ಟಿ ವಂದಿಸಿದರು.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement