ಕನ್ನಡ ರಾಜ್ಯೋತ್ಸವ ವಿಶೇಷ: ಭಾಷಾ ಭಾರತಿ ಪ್ರಾಧಿಕಾರದಿಂದ ಕನ್ನಡ ಕೈಬರಹದ ರಾಷ್ಟ್ರಮಟ್ಟದ ಸ್ಪರ್ಧೆ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ (ಅನುವಾದ ಅಕಾಡೆಮಿ) ‘ಕನ್ನಡಕ್ಕಾಗಿ ನಾವು’ ಅಭಿಯಾನ ಆಯೋಜಿಸಿದ್ದು, ಅಭಿಯಾನದ ಅಂಗವಾಗಿ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸುಂದರ ಕನ್ನಡ ಕೈಬರಹದಲ್ಲ ಬರೆಯುವ ಸ್ಪರ್ಧೆ ನಡೆಸಲಾಗುತ್ತಿದೆ.
ದೇಶದ ಯಾವುದೇ ಭಾಗದಲ್ಲಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಏಳನೆಯ ತರಗತಿ ವರೆಗಿನ ವಿಭಾಗ, ಎಂಟರಿಂದ ದ್ವಿತೀಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ವಿವಿಧ ವೃತ್ತಿಪರ ಪದವಿ ಸೇರಿದಂತೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಪ್ರತಿ ವಿಭಾಗದಲ್ಲೂ ಮೂವರು ವಿದ್ಯಾರ್ಥಿಗಳಿಗೆ, ಅಂದರೆ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಲಾ ₹ 5 ಸಾವಿರ ಬಹುಮಾನ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?’ ಎಂಬ ವಿಷಯದ ಬಗ್ಗೆ ಎ4 ಹಾಳೆಯ ಒಂದು ಪುಟದಲ್ಲಿ ಸುಂದರ ಕೈಬರಹದಲ್ಲಿ ಬರೆದು ಕನ್ನಡದಲ್ಲಿ ಸಹಿ ಮಾಡಬೇಕು. ಅದೇ ಹಾಳೆಯ ಹಿಂದಿನ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ ಮತ್ತು ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಯ ವಿಳಾಸ ಮತ್ತು ತಮ್ಮ ಅಥವಾ ಹೆತ್ತವರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದರ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ, ಸಹಿ, ಮೊಹರು ಮತ್ತು ದೂರವಾಣಿ ಸಂಖ್ಯೆ ಇರಬೇಕು.
ಸ್ಪರ್ಧಿಗಳು ತಮ್ಮ ಬರಹವನ್ನು ತ್ವರಿತ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ ಅಂಚೆ, ಬೆಂಗಳೂರು- 560 056 ವಿಳಾಸಕ್ಕೆ ಕಳುಹಿಸಿಕೊಡಬೇಕು. ಲಕೋಟೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಸಹಿತ ವಿದ್ಯಾಸಂಸ್ಥೆಯ ವಿಳಾಸ ನಮೂದಿಸಬೇಕು. ಪ್ರವೇಶಿಕೆಗಳು ಮೇಲೆ ನೀಡಲಾದ ವಿಳಾಸಕ್ಕೆ ತಲುಪಲು ಕೊನೆಯ ದಿನಾಂಕ ಅಕ್ಟೋಬರ್ 29 ಕೊನೆಯ ದಿನ. ಹೊರರಾಜ್ಯಗಳಿಂದ ಬರುವ ಪ್ರವೇಶಿಕೆಗಳಿಗೆ ಅಕ್ಟೋಬರ್ 30 ಕೊನೆಯ ದಿನ. ಸಂಪರ್ಕ ಸಂಖ್ಯೆ 080 23183312 ಎಂದು ಮಾಹಿತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement