ಠೇವಣಿ ಕಳೆದುಕೊಳ್ಳಲು ನಿಮಗೆ ಸ್ಥಾನ ನೀಡಬೇಕೇ: ಕಾಂಗ್ರೆಸ್ ವಿರುದ್ಧ ಲಾಲೂ ಗರಂ

ಪಾಟ್ನಾ: ಪ್ರಮುಖ ಮಿತ್ರಪಕ್ಷ ಕಾಂಗ್ರೆಸ್ಸಿನ ಬಲವನ್ನೇ ಪ್ರಶ್ನಿಸಿರುವ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್, “ನಿಮಗೆ ಸೋಲಲು ಅಥವಾ ಠೇವಣಿ ಕಳೆದುಕೊಳ್ಳಲು ವಿಧಾನಸಭೆ ಸ್ಥಾನಗಳನ್ನು ಬಿಟ್ಟುಕೊಡಬೇಕೇ” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಬಿಹಾರದ ಎಐಸಿಸಿ ಉಸ್ತುವಾರಿ ಭಕ್ತ ಚರಣ್ ದಾಸ್ ಅವರನ್ನು ಅವಿವೇಕಿ ಎಂದು ಲಾಲೂ ಕರೆದಿರುವುದಕ್ಕೆ ಕಾಂಗ್ರೆಸ್ ಪಕ್ಷದಿಂದ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಅಲ್ಲದೆ ಎನ್‌ಡಿಎ ಒಕ್ಕೂಟದಿಂದಲೂ ಟೀಕೆ ವ್ಯಕ್ತವಾಗಿದೆ.
ಪಾಟ್ನಾಕ್ಕೆ ತೆರಳುವ ಮುನ್ನ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ತಿಂಗಳ 30ರಂದು ನಡೆಯುವ ಕುಶೇಶ್ವರ ಆಸ್ಥಾನ್ ಮತ್ತು ತಾರಾಪುರ ಉಪ ಚುನಾವಣೆಗಳ ಬಗ್ಗೆ ಕೇಳಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ. ಕುಶೇರ್ಶವರ ಆಸ್ಥಾನ ಕ್ಷೇತ್ರದಲ್ಲಿ 2020ರ ಚುನಾವಣೆಯಲ್ಲಿ ಕಾಂಗ್ರೆಸ್ 2ನೇ ಸ್ಥಾನ ಗಳಿಸಿದ್ದರೂ, ಈ ಸ್ಥಾನವನ್ನು ಪ್ರಸಕ್ತ ಚುನಾವಣೆಯಲ್ಲಿ ಪಕ್ಷಕ್ಕೆ ಬಿಟ್ಟುಕೊಡಲು ಆರ್‌ಜೆಡಿ ನಿರಾಕರಿಸಿತ್ತು. ಈಗ ಆರ್‌ಜೆಡಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಜೆಡಿಯು ವಿರುದ್ಧ ಕಣಕ್ಕೆ ಇಳಿದಿವೆ.
ಬಿಹಾರದಲ್ಲಿ ಮಹಾಮೈತ್ರಿ ಅಕ್ಷರಶಃ ಮುರಿದು ಬಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ, “ಕಾಂಗ್ರೆಸ್ ಜತೆ ಏನು ಮೈತ್ರಿ” ಎಂದು ಲಾಲೂ ಮರು ಪ್ರಶ್ನಿಸಿದ್ದಾರೆ. ಆರ್‌ಜೆಡಿ ಹಾಗೂ ಜೆಡಿಯು ರಹಸ್ಯ ಒಪ್ಪಂದ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಗಮನ ಸೆಳೆದಾಗ, “ಭಕ್ತಚರಣ್ ದಾಸ್ ಒಬ್ಬ ಅವಿವೇಕಿ” ಎಂದು ಜರೆದರು.
2020ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನ, ನಿತೀಶ್ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಹೇಳಿದ ಅವರು ಕಾಂಗ್ರೆಸ್‌ಗೆ ನೀಡಿದ್ದ 70 ಸ್ಥಾನಗಳ ಪೈಕಿ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು ಎಂದು ಟೀಕಿಸಿದರು.
ಲಾಲೂ ಟೀಕೆಯನ್ನು ಕಾಂಗ್ರೆಸ್ ಶಾಸಕ ಶಕೀಲ್ ಅಹ್ಮದ್ ಖಂಡಿಸಿದ್ದು, ಇಂಥ ಹೇಳಿಕೆ ಲಾಲೂ ಅವರ ದಲಿತ ವಿರೋಧಿ ಹಾಗೂ ಸರ್ವಾಧಿಕಾರಿ ಧೋರಣೆಯ ಪ್ರತೀಕ ಎಂದು ಹೇಳಿದ್ದಾರೆ. ಕಾಂಗ್ರೆಸ್ ಜತೆಗಿನ ಹಲವು ವರ್ಷಗಳ ಮೈತ್ರಿಯಿಂದ ಹತಾಶವಾದ ಲಾಲೂ ಇಂಥ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement