ಮುಂಬೈ : ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದ್ದು, ಇದರಿಂದಾಗಿ ರಾಹುಲ್ ಕೋಚ್ ಹುದ್ದೆಗೆ ಇರುವ ಗೊಂದಲಕ್ಕೆ ತೆರೆಬಿದ್ದಿದೆ.
ಈಗ ಕೋಚ್ ಆಗಿರುವ ರವಿಶಾಸ್ತ್ರೀ ಒಪ್ಪಂದದ ಅವಧಿ ಟಿ-20 ವಿಶ್ವಕಪ್ ಬೆನ್ನಲ್ಲೇ ಮುಕ್ತಾಯವಾಗಲಿದೆ. ಮುಂದಿನ ಟೀಂ ಇಂಡಿಯಾ ಮುಖ್ಯ ಕೋಚ್ ಆಗುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜೈ ಶಾ ಅವರು ರಾಹುಲ್ ದ್ರಾವಿಡ್ ಅವರ ಮನವೊಲಿಸಿದ್ದರು. ಈಗ ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೆ ಔಪಚಾರಿಕವಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅವರು, ಭಾರತ ಕಿರಿಯರ ತಂಡ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಈಗಾಗಲೇ ಬಿಸಿಸಿಐ ಬೌಲಿಂಗ್ ಕೋಚ್ ಹುದ್ದೆಗೆ ಪಾರಸ್ ಮಾಂಬ್ರೆ, ಫೀಲ್ಡಿಂಗ್ ಕೋಚ್ ಅಭಯ್ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಭಾರತ ತಂಡದ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರು ಆಯ್ಕೆಯಾಗಲಿದ್ದಾರೆ.
ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆದ್ರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಭಾರತ ತಂಡ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ಆಯ್ಕೆ ಯಾಗುವ ಸಾಧ್ಯತೆಯಿದೆ. .


ನಿಮ್ಮ ಕಾಮೆಂಟ್ ಬರೆಯಿರಿ