​ಪೆಗಾಸಸ್ ಬೇಹುಗಾರಿಕೆ ಪ್ರಕರಣ: ತನಿಖೆ ಕುರಿತು ನಾಳೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟ


ನವದೆಹಲಿ: ಪೆಗಾಸಸ್ ಬೇಹುಗಾರಿಕೆ (Pegasus Case) ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯ ಸ್ವತಂತ್ರ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನಾಳೆ (ಬುಧವಾರ) ತೀರ್ಪು ಪ್ರಕಟಿಸಲಿದೆ.
ಸರ್ಕಾರಿ ಏಜೆನ್ಸಿಗಳಿಂದ ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಪೆಗಾಸಸ್ ಬೇಹುಗಾರಿಕೆ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಮಾಡಲು ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಸೆ. 23ರಂದು ಹೇಳಿತ್ತು .ಈ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿಯೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದರು.

ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ ಭಾರತದ ಹಲವಾರು ಪ್ರಮುಖರ ಫೋನ್‌ಗಳನ್ನು ಹ್ಯಾಕ್ ಮಾಡಿದ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಕೇಂದ್ರವು ಈ ಹಿಂದೆ ನ್ಯಾಯಾಲಯವನ್ನು ಕೋರಿತ್ತು.
ಅರ್ಜಿಗಳ ಕುರಿತು ನ್ಯಾಯಾಲಯವು ಕೇಂದ್ರಕ್ಕೆ ನೋಟಿಸ್ ನೀಡಿತ್ತು.ಆಗಸ್ಟ್ 17 ರಂದು, ಕೇಂದ್ರ ಸರ್ಕಾರವು ತಜ್ಞರ ಸಮಿತಿಗೆ ವಿವಾದದ ಬಗ್ಗೆ ವಿವರಗಳನ್ನು ನೀಡಲು ಸಿದ್ಧವಾಗಿದೆ, ಆದರೆ ರಾಷ್ಟ್ರೀಯ ಭದ್ರತೆಯ ಪರಿಣಾಮಗಳ ಭಯದಿಂದ ನ್ಯಾಯಾಲಯದ ಮುಂದೆ ಅದನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದು ಹೇಳಿತ್ತು.
ಹೀಗಿರುವಾಗ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್ ಏಕೆ ಸಲ್ಲಿಸಲಾಗಲಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ಕೇಂದ್ರದ ಅಫಿಡವಿಟ್ ಇಲ್ಲದೆಯೇ ಆದೇಶ ಹೊರಡಿಸುವುದಾಗಿ ಹೇಳಿ ಕೋರ್ಟ್ ಅಂತಿಮವಾಗಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಸೆಪ್ಟೆಂಬರ್ 13ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಿದ ಅರ್ಜಿಗಳ ಬ್ಯಾಚ್‌ನ ಆದೇಶವನ್ನು ಕಾಯ್ದಿರಿಸಿತ್ತು.
ಇಸ್ರೇಲ್‌ ಮೂಲದ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂದು 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದ್ದು, ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು ವರದಿ ತಿಳಿಸಿತ್ತು.
ಬಹಿರಂಗಗೊಂಡ ಫೋನ್‌ ಸಂಖ್ಯೆಗಳಲ್ಲಿ ಕೆಲವು ಫೋನ್‌ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್‌ ಸ್ಪೈ ವೇರ್‌ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿದೆ ಎಂದು ವರದಿಗಳು ತಿಳಿಸಿತ್ತು. ಆ ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರದ ಹುದ್ದೆಯಲ್ಲಿರುವವರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಂತ್ರಿಗಳು, ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ವರದಿಗಳು ತಿಳಿಸಿತ್ತು.
ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಕೇಂದ್ರ ಸರ್ಕಾರ ಪೆಗಾಸಸ್ ಅನ್ನು ಬಳಸಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement