ತಾಂತ್ರಿಕ ಶಿಕ್ಷಣ ಇಲಾಖೆಗೆ 15 ಸಾವಿರ ಕಂಪ್ಯೂಟರ್ ನೀಡಿದ ಇನ್ಫೋಸಿಸ್

ಬೆಂಗಳೂರು: ಜಾಗತಿಕ ಸಾಫ್ಟವೇರ್‌ ದೈತ್ಯ ಇನ್ಫೋಸಿಸ್ ಸಂಸ್ಥೆ 15 ಸಾವಿರ ಕಂಪ್ಯೂಟರುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ಕೊಡುಗೆಯಾಗಿ ನೀಡಿದೆ. ಇನ್ಫೋಸಿಸ್ ಸಂಸ್ಥೆ, ರೋಟರಿ ಸಂಸ್ಥೆ, ತಾಂತ್ರಿಕ ಶಿಕ್ಷಣ ಇಲಾಖೆಯ ನಡುವೆ ಒಡಂಬಡಿಕೆಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ ಸಹಿ ಮಾಡಿದ್ದು, ಇದರ ಅಂಗವಾಗಿ ಇನ್ಫೋಸಿಸ್, ತಾಂತ್ರಿಕ ಶಿಕ್ಷಣ ಇಲಾಖೆಗೆ 15 ಸಾವಿರ ಕಂಪ್ಯೂಟರ್ ದೇಣಿಗೆ ನೀಡಿದೆ.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಡಿಸಿಟಿಇ. ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಬುಧವಾರ ಸಹಿ ಹಾಕಿದರು.
ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ, “ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಇನ್ಫೋಸಿಸ್ ಕಂಪನಿಯು 35 ಕೋಟಿ ರೂ.ಗಳ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯ ಆಗುವಂತೆ ಮಾಡಲಿದೆ. ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಹಾಗೂ 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ನೀಡುತ್ತಿದ್ದು, ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ಹೇಳಿದರು.
ಈ ಒಡಂಬಡಿಕೆಯು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲರ್ನಿಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

“ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ ಇನ್ಫೋಸಿಸ್ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರುಗಳ ಅಗತ್ಯವಿತ್ತು. ಈಗ ಇನ್ಫೊಸಿಸ್ 15,000 ಕಂಪ್ಯೂಟರುಗಳನ್ನು ನೀಡಿದ್ದರಿಂದ ಒಟ್ಟು 27,000 ಕಂಪ್ಯೂಟರುಗಳು ಲಭ್ಯವಾಗಿವೆ ಎಂದರು.
ಈ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಅವರು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ಫೊಸಿಸ್ ಕಂಪನಿಯು ತನ್ನ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ, ಜಾಗತಿಕ ಗುಣಮಟ್ಟದ ನಿರಂತರ ಕಲಿಕೆ ಹಾಗೂ ಪ್ರತಿಭಾ ವೃದ್ಧಿಗೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ. ಈಗ ಒಡಂಬಡಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅವಕಾಶವಾಗಿದೆ” ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರವೀಣ್ ರಾವ್ ಹೇಳಿದರು.
ರೋಟರಿ ಇಂಡಿಯಾ ಲಿಟರರಿ ಮಿಷನ್ ನ ರಾಜೇಂದ್ರ ರಾಯ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್ ಪಿ ಅವರು ಮಾತನಾಡಿದರು. ಡಿಸಿಟಿಯ ನಿರ್ದೇಶಕ ಮಂಜುನಾಥ್ ಆರ್. ಮತ್ತು ಜಂಟಿ ನಿರ್ದೇಶಕ ಶಿವಶಂಕರ್ ನಾಯ್ಕ್ ಎಲ್. ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement