ಚೆನ್ನೈ: ಜಲಪಾತದಲ್ಲಿ ನೀರಿನ ರಭಸದ ಮಧ್ಯೆ ಸಿಲುಕಿಕೊಂಡಿದ್ದ ತಾಯಿ ಮತ್ತು ಮಗುವನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತಮಿಳುನಾಡಿನ ಅರಣ್ಯಾಧಿಕಾರಿಗಳು ಜಲಪಾತದಿಂದ ಹಗ್ಗದ ಸಹಾಯದಿಂದ ತಾಯಿ ಮತ್ತು ಮಗುವನ್ನು ರಕ್ಷಿಸುತ್ತಿರುವ ಈ ವಿಡಿಯೊವನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು ಈ ಸಾಹಸಕ್ಕೆ ಕೊಂಡಾಡಿದ್ದಾರೆ.
ತಮಿಳುನಾಡಿನ ಅನೈವಾರಿ ಮುಟ್ಟಲ್ ಜಲಪಾತವಾಗಿ ಧುಮ್ಮಿಕ್ಕುತ್ತಿದ್ದ ನೀರಿನಿಂದ ತೀರ ಸಮೀಪದಲ್ಲಿ ತಾಯಿ ಮತ್ತು ಮಗು ಸಿಲುಕಿದ್ದರು. ಬಂಡೆಯೊಂದನ್ನು ಹಿಡಿದುಕೊಂಡು ಜೀವ ಕಪಾಡಿಕೊಂಡಿದ್ದ ತಾಯಿ-ಮಗುವನ್ನು ಅರಣ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ರಕ್ಷಿಸಿದ್ದಾರೆ. ಅವರು ಅಲ್ಲಿಗೆ ತಲುಪುವುದು ಕೊಂಚ ತಡವಾಗಿದ್ದರೂ ತಾಯಿ-ಮಗು ನೀರಿನಲ್ಲಿ ಕೊಚ್ಚಿ ಸಂಭವವಿತ್ತು. ಯಾಕೆಂದರೆ ಹರಿಯುವ ನೀರು ಭೋರ್ಗರೆಯುತ್ತಿತ್ತು. ಮತ್ತು ಮಟ್ಟ ಹೆಚ್ಚಾಗುತ್ತಿತ್ತು.
ಈ ಜಲಪಾತವು ಸೇಲಂ ಜಿಲ್ಲೆಯ ಸಮೀಪದ ಕಲ್ಲವರಾಯನ ಬೆಟ್ಟಗಳ ಬಳಿಯಿದ್ದು, ಎರಡು ತಿಂಗಳ ಹಿಂದಷ್ಟೇ ಈ ಜಲಪಾತಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.
ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಬಂಡೆಯ ಮೇಲೆ ಕುಳಿತಿದ್ದಳು. ಅರಣ್ಯ ಇಲಾಖೆ ಸಿಬ್ಬಂದಿ ಕಡಿದಾದ ಪ್ರದೇಶದಲ್ಲಿ ಮರಗಿಡಗಳನ್ನು ಹಿಡಿದು ಹಗ್ಗದ ಸಹಾಯದಿಂದ ಇಳಿದುನಿಧಾನವಾಗಿ ಅವಳ ಬಳಿಗೆ ಹೋಗಿ ಮೊದಲು ಮಗುವನ್ನು ಮೊದಲು ಎಳೆದುಕೊಂಡು ಒಬ್ಬರ ಕೈಯಿಂದ ಒಬ್ಬರ ಕೈಯಿಗೆ ದಾಟಿಸಿದ್ದಾರೆ. ಬಳಿಕ ಆ ಮಹಿಳೆಯನ್ನು ಕೂಡ ರಕ್ಷಿಸಲಾಗಿದೆ. ಜಲಪಾತದ ಇನ್ನೊಂದು ಬದಿಯಲ್ಲಿ ಜನರು ಕಿರುಚುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ರಕ್ಷಣೆ ಎಷ್ಟು ಅಪಾಯಕಾರಿ ಆಗಿತ್ತೆಂದರೆ ಸ್ವಲ್ಪ ಅಜಾಗರೂಕತೆಯಾದರೂ ರಕ್ಷಣೆಗೆ ಹೋದರವರೇ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು.
ಇಲ್ಲಿ ತಾಯಿ ಹಾಗೂ ಮಗುವನ್ನು ಕಾಪಾಡಿದ್ದು ಅರಣ್ಯ ಇಲಾಖೆಯವರ ಧೈರ್ಯ. ಅರಣ್ಯಾಧಿಕಾರಿಗಳ ಧೈರ್ಯ ಮತ್ತು ಸಮಯಪ್ರಜ್ಞೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಹಲವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳು ಮೇಲಿನ ಮರಕ್ಕೆ ಕಟ್ಟಿದ್ದ ಹಗ್ಗದ ಸಹಾಯದಿಂದ ಮಗು ಮತ್ತು ಮಹಿಳೆಯನ್ನು ಮೇಲಕ್ಕೆತ್ತುವ ಮೂಲಕ ರಕ್ಷಣೆ ಮಾಡಿದ್ದಾರೆ.
ತಾಯಿ ಮತ್ತು ಮಗುವನ್ನು ರಕ್ಷಿಸಿದವರ ಧೈರ್ಯದ ಈ ಕೆಲಸ ಬಹಳ ಶ್ಲಾಘನೀಯವಾಗಿದೆ. ಈ ಸಿಬ್ಬಂದಿಗೆ ಸರ್ಕಾರ ಧನ್ಯವಾದ ತಿಳಿಸುತ್ತಿದೆ. ಇತರರ ಪ್ರಾಣವನ್ನು ಉಳಿಸುವ ಮೂಲಕ ಅವರು ಧೈರ್ಯದ ಜೊತೆಗೆ ಮಾನವೀಯತೆ ಮೆರೆದಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.
ಸೇಲಂನ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಕೆ ಗೌತಮ್ ಪ್ರಕಾರ, ಕಲ್ಲವರಾಯನ ಬೆಟ್ಟಗಳಿಂದ ಮಳೆಯ ನೀರಿನಿಂದಾಘಗಿ ಜಲಪಾತವು ಭೋರ್ಗರೆಯುತ್ತಿತ್ತು.
ಕರುಮಂದುರೈ ಪ್ರದೇಶದಲ್ಲಿ ಭಾರೀ ಮಳೆಯು ಕೇವಲ ಅರ್ಧ ಗಂಟೆಯಲ್ಲಿ ಪ್ರವಾಹದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಸೋಮವಾರ, ಇತರ ದಿನಗಳಿಗಿಂತ ನೀರಿನ ಮಟ್ಟ ಹೆಚ್ಚಾಗಿದೆ ಎಂದು ಡಿಎಫ್‌ಒ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ನಂತರ ಸೇಲಂ ಜಿಲ್ಲಾ ಅಧಿಕಾರಿಗಳು ಈ ಪ್ರದೇಶದಿಂದ ಎಲ್ಲಾ ಪ್ರವಾಸಿಗರನ್ನು ಸ್ಥಳಾಂತರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ