ಕರ್ನಾಟಕದ ಎಲ್ಲ ದಿಕ್ಕುಗಳಲ್ಲೂ ಮೊಳಗಿದ ಕನ್ನಡ ಡಿಂಡಿಮ

ಬೆಂಗಳೂರು: ಕನ್ನಡ ನಾಡಿನ ದಶದಿಕ್ಕುಗಳಲ್ಲೂ ಇಂದು ಕನ್ನಡ ಗೀತಗಾಯನ ಮೊಳಗಿತು. ನಾಡಿನ ಶಕ್ತಿ ಕೇಂದ್ರ ವಿಧಾನಸೌಧ, ಜಿಲ್ಲೆ, ತಾಲ್ಲೂಕು ಕೇಂದ್ರಗಳು ಹಾಗೂ ಹಳ್ಳಿ – ಹಳ್ಳಿಗಳು ಸೇರಿದಂತೆ, ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ೫ ಲಕ್ಷ ಕಂಠಗಳಲ್ಲಿ ಕನ್ನಡ ಗೀತಗಾಯನ ಮೊಳಗಿತು.
ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನ ಆಡಳಿತ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗ ಹಿಂದೆಂದೂ ಕಂಡು ಕೇಳರಿಯದ ಇತಿಹಾಸಕ್ಕೆ ಸಾಕ್ಷಿಯಾಯಿತು. ಈ ಮೂಲಕ ದಶದಿಕ್ಕುಗಳಲ್ಲೂ ಕನ್ನಡ ಗೀತ ಗಾಯನದ ಉದ್ಘೋಷ ಮಾರ್ದನಿಸಿತು.
ವಿಧಾನಸೌಧದ ಎಲ್ಲ ಮೆಟ್ಟಿಲುಗಳ ಮೇಲೆ ಬಣ್ಣಬಣ್ಣದ ಉಡುಗೆ-ತೊಡುಗೆ ತೊಟ್ಟ ಪುರುಷರು ಮಹಿಳೆಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು, ಆರಕ್ಷಕ ಅಧಿಕಾರಿಗಳು ಆರಕ್ಷಕ ಸಿಬ್ಬಂದಿ ಹೀಗೆ ಯಾವ ಭೇದ ಭಾವಗಳಿಲ್ಲದೆ, ಶಿಷ್ಟಾಚಾರಗಳ ಹಂಗಿಲ್ಲದೆ ಒಟ್ಟಿಗೆ ನಿಂತು ಕನ್ನಡದ ಗೀತೆಗಳನ್ನು ಹಾಡುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ಒಂದು ಚರಿತ್ರಾರ್ಹ ಘಟನೆಯಾಗಿ ದಾಖಲಾಯಿತು.
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತಾಡ್ ಮಾತಾಡ್ ಕನ್ನಡ ಹೆಸರಿನಲ್ಲಿ ಏಳು ದಿನಗಳ ಕಾಲ ಕನ್ನಡಕ್ಕಾಗಿ ನಾವು ಅಭಿಯಾನ ನಡೆಸುತ್ತಿದ್ದು, ಈ ಅಭಿಯಾನದ ಅಂಗವಾಗಿ ಇಂದು (ಗುರುವಾರ) ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಕನ್ನಡ ಗೀತ ಗಾಯನದ ಮೂಲಕ ಕನ್ನಡ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟರು.
ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ, ಎಲ್ಲಾ ಸರ್ಕಾರಿ ಕಚೇರಿಗಳು, ಪ್ರಮುಖ ವೃತ್ತಗಳು, ಜಿಲ್ಲಾಧಿಕಾರಿಗಳ ಕಚೇರಿಗಳು, ತಾಲ್ಲೂಕು ಕಚೇರಿಗಳು, ಗ್ರಾಮ ಪಂಚಾಯ್ತಿ ಕಚೇರಿಗಳು ಹೀಗೆ ಎಲ್ಲೆಡೆ ಇಂದು ಕನ್ನಡದ ಡಿಂಡಿಮ ಮೊಳಗಿತು.
ಮಾತಾಡ್ ಮಾತಾಡ್ ಕನ್ನಡ ಹೆಸರಿನ ಕನ್ನಡಕ್ಕಾಗಿ ನಾವು ಅಭಿಯಾನದ ೫ ಲಕ್ಷ ಕಂಠಗಳ ಗೀತ ಗಾಯನ ಕಾರ್ಯಕ್ರಮದ ಪ್ರಮುಖ ಸಮಾರಂಭ ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಡೆಯಿತು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ, ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ವಿ. ಸುನೀಲ್‌ಕುಮಾರ್ ಸಮ್ಮುಖದಲ್ಲಿ ವಿಧಾನಸೌಧ, ವಿಕಾಸಸೌಧದ ಎಲ್ಲ ಅಧಿಕಾರಿಗಳು, ನೌಕರರು ಹಾಗೂ ಸಾರ್ವಜನಿಕರು ಈ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿಧಾನಸೌಧ ಪೂರ್ವ ದ್ವಾರದ ಎಲ್ಲ ಮೆಟ್ಟಿಲುಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಸೇರಿದವರು ಕನ್ನಡದ ಮೂರು ಗೀತೆಗಳನ್ನು ಹಾಡುವ ಮೂಲಕ ಕನ್ನಡ ಗೀತ ಗಾಯನ ಕಾರ್ಯಕ್ರಮಕ್ಕೆ ಜತೆಯಾದರು.
ಮೊದಲಿಗೆ ನಾಡಗೀತೆ ಜಯಕರ್ನಾಟಕ ಮಾತೆಯಿಂದ ಗಾಯನ ಆರಂಭವಾಗಿ, ನಂತರ ಬಾರಿಸು ಕನ್ನಡ ಡಿಂಡಿಮ, ಜೋಗದ ಸಿರಿ ಬೆಳಕಿನಲ್ಲಿಎಂಬ ಹಾಡುಗಳನ್ನು ಹಾಡುವ ಮೂಲಕ ವಿಧಾನಸೌಧ ಸೇರಿದಂತೆ ನಾಡಿನ ಎಲ್ಲೆಡೆ ಕನ್ನಡ ಧ್ವನಿ ಮೊಳಗಿತು.
ಪ್ರತಿಜ್ಞೆ ವಿಧಿ ಬೋಧಿಸಿದ ಸಚಿವರು
ಕನ್ನಡದ ಗೀತ ಗಾಯನದ ನಂತರ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್, ಗೀತ ಗಾಯನದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಕನ್ನಡ ಉಳಿಸಿ ಬೆಳೆಸುವ ಪ್ರತಿಜ್ಞಾ ವಿಧಿ ಬೋಧಿಸಿದರು.
ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂಬ ಪಣ ತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ಧರಾಗಿರುತ್ತೇನೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಸಂಕಲ್ಪ ತೊಟ್ಟರು.
ನಾಡಿನ ದಶದಿಕ್ಕುಗಳಲ್ಲೂ ಕನ್ನಡದ ಸಂಸ್ಕೃತಿ, ವೈಭವ, ಶ್ರೇಷ್ಠತೆಯನ್ನು ಸಾರುವ ಗೀತಗಾಯನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ಪಾಲ್ಗೊಂಡು ಕನ್ನಡದ ಗೀತೆಯನ್ನು ಹಾಡುವ ಸಾಮೂಹಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹುಬ್ಬಳ್ಳಿಯಲ್ಲಿಂದು ಮಹಾನಗರ ಪಾಲಿಕೆ ಏರ್ಪಡಿಸಿದ್ದ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು, ಕನ್ನಡದ ಧ್ವಜವನ್ನು ಹಿಡಿದು ತಮ್ಮ ಮೆಚ್ಚಿನ ಹುಟ್ಟಿದರೆ ಕನ್ನಡ ನಾಡಿನಲಿ ಹುಟ್ಟಬೇಕು ಹಾಡನ್ನು ಹಾಡಿ ಸಂಭ್ರಮಿಸಿದರು.
ಮುಖ್ಯಮಂತ್ರಿಗಳ ಜತೆ ಶಾಸಕರಾದ ರಾಜೂಗೌಡ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement