ನೀಟ್‌’ ಫಲಿತಾಂಶ ಪ್ರಕಟಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ದೇಶಾದ್ಯಂತ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ 2021ನೇ ಸಾಲಿನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯ ಫಲಿತಾಂಶ ಪ್ರಕಟಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.
“ನಾವು ಹೈಕೋರ್ಟ್ ತೀರ್ಪಿಗೆ ತಡೆ ನೀಡುತ್ತೇವೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶವನ್ನು ಪ್ರಕಟಿಸಬಹುದು” ಎಂದು ಎನ್‌ಟಿಎ ಪರವಾಗಿ ವಾದಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಪೀಠ ತಿಳಿಸಿದೆ.
2021-22ನೇ ಸಾಲಿನ ವೈದ್ಯಕೀಯ ಪದವಿ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕಳೆದ ಸೆಪ್ಟಂಬರ್ 12ರಂದು ದೇಶಾದ್ಯಂತ ರಾಷ್ಟ್ರೀಯ ಸಾಮಾನ್ಯ ಅರ್ಹತಾ ಪರೀಕ್ಷೆ (ಎನ್‍ಇಇಟಿ) ನಡೆಸಿತ್ತು.
202 ನಗರಗಳ 3,682 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 16,14,777 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. 9,588 ಕೇಂದ್ರ ಅಧೀಕ್ಷಕರು, ಉಪ ಅಧೀಕ್ಷಕರು, 5615 ವೀಕ್ಷಕರು ಕಾರ್ಯನಿರ್ವಹಿಸಿದ್ದರು. 220 ಕೇಂದ್ರಗಳಲ್ಲಿ ನಡೆದ ಮೌಲ್ಯಮಾಪನದಲ್ಲಿ 2,69,378 ಮೌಲ್ಯಮಾಪಕರು ಭಾಗವಹಿಸಿದ್ದರು.
ಪರೀಕ್ಷೆಯ ದಿನದಂದು ಮಹಾರಾಷ್ಟ್ರದ ಕೇಂದ್ರವೊಂದರಲ್ಲಿ ವೈಷ್ಣವಿ ಭೂಪಾಲಿ ಮತ್ತು ಅಭಿಶೇಕ್ ಶಿವಾಜಿ ಎಂಬ ಇಬ್ಬರು ವಿದ್ಯಾರ್ಥಿಗಳ ಒಎಂಆರ್ ಹಾಳೆ ಮತ್ತು ಬುಕ್‍ಲೆಟ್ ಅದಲು ಬದಲಾಗಿದ್ದವು. ಈ ವಿದ್ಯಾರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಫಲಿತಾಂಶ ಪ್ರಕಟಿಸಲು ತಡೆಯಾಜ್ಞೆ ನೀಡಿತ್ತು ಹಾಗೂ ಹೊಸದಾಗಿ ಪರೀಕ್ಷೆ ನಡೆಸುವಂತೆ ಅಕ್ಟೋಬರ್ 20ರಂದು ಆದೇಶಿಸಿತ್ತು.
ಹೈಕೋರ್ಟ್‍ನ ಆದೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿತ್ತು. ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಸುಪ್ರೀಂಕೋರ್ಟ್ ಎಲ್.ನಾಗೇಶ್ವರ ರಾವ್, ಸಂಜೀವ್ ಖನ್ನಾ ಮತ್ತು ಬಿ.ಆರ್.ಗಾವಿ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಾಂಬೆ ಹೈಕೋರ್ಟ್‍ನ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಪರೀಕ್ಷಾ ಸಂಸ್ಥೆ ಎನ್‍ಇಇಟಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ಸೂಚಿಸಿದೆ.
ತಕರಾರು ಅರ್ಜಿ ಸಲ್ಲಿಸಿರುವ ಇಬ್ಬರು ವಿದ್ಯಾರ್ಥಿಗಳ ಕುರಿತಂತೆ ದೀಪಾವಳಿ ರಜೆಯ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಸುಪ್ರೀಕೋರ್ಟ್ ತಿಳಿಸಿದೆ. ಆದಾಗ್ಯೂ ನೋಟಿಸ್ ನೀಡಿ ಕೌಂಟರ್ ದಾಖಲಿಸಲು ಅನುಮತಿ ನೀಡಲಾಗುವುದು. ಇಬ್ಬರು ವಿದ್ಯಾರ್ಥಿಗಳಿಗಾಗಿ 16 ಲಕ್ಷ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ಪ್ರಮುಖ ಸುದ್ದಿ :-   ಮೂಲೆಗುಂಪು-ಹತಾಶ ; ʼಸಿಂಧೂ ಜಲ ಒಪ್ಪಂದ ಸಸ್ಪೆಂಡ್‌ʼ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತಕ್ಕೆ ಪತ್ರ ಬರೆದ ಪಾಕಿಸ್ತಾನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement