ಲಕ್ನೋ: ಗೋಲ್ ಗಪ್ಪಾಸ್ ತಿಂದಿದ್ದಕ್ಕಾಗಿ ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಶಾಲೆಯೊಂದರ ಪ್ರಾಂಶುಪಾಲರು ಆರು ವರ್ಷದ ವಿದ್ಯಾರ್ಥಿಯನ್ನು ಕಟ್ಟಡದ ಮೊದಲ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಿ ಶೀಕ್ಷೆ ನೀಡಿದ ವಿಡಿಯೋ ವೈರಲ್ ಆದ ನಂತರ ಅವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಸಂಭವಿಸಿದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೊದಲ್ಲಿ ಸದ್ಭಾವನಾ ಶಿಕ್ಷಣ ಸಂಸ್ಥಾನ ಜೂನಿಯರ್ ಹೈಸ್ಕೂಲ್‌ನ ಇತರ ಮಕ್ಕಳು ಪ್ರಾಂಶುಪಾಲ ಮನೋಜ್ ವಿಶ್ವಕರ್ಮ ಮಗುವನ್ನು ತಲೆಕೆಳಗಾಗಿ ನೇತಾಡುವುದನ್ನು ಆಘಾತದಿಂದ ನೋಡುತ್ತಿರುವುದನ್ನು ಕಾಣಬಹುದು.
ಶಿಕ್ಷಕರಿಗೆ ತಿಳಿಸದೆ ಶಾಲೆಯ ಹೊರಗಿನ ಸ್ಟಾಲ್‌ನಲ್ಲಿ ಮಗು ಗೋಲ್ ಗಪ್ಪಾಸ್ ತಿಂದಿದ್ದರಿಂದ ಇಂಥ ಶಿಕ್ಷೆ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ವಿದ್ಯಾರ್ಥಿಯು ಶಾಲೆಗೆ ಹಿಂತಿರುಗಿದ ಕೂಡಲೇ ಪ್ರಾಂಶುಪಾಲ ಆತನ ಪಾದಗಳನ್ನು ಹಿಡಿದು ಮೊದಲನೇ ಮಹಡಿಯಿಂದ ಗಾಳಿಯಲ್ಲಿ ತಲೆಕೆಳಗಾಗಿಸಿದ್ದಾರೆ.
ಈ ಶಿಕ್ಷೆಯಿಂದ ಐದು ವರ್ಷದ ಮಗು ಅಳಲು ಪ್ರಾರಂಭಿಸಿತು ಮತ್ತು ಮನೆಗೆ ಬಂದ ನಂತರ ತನ್ನ ಪೋಷಕರಿಗೆ ಘಟನೆ ಬಗ್ಗೆ ಹುಡುಗ ತಿಳಿಸಿದ್ದಾನೆ. ನಂತರ ತಂದೆ ರಂಜಿತ್ ಯಾದವ್ ಪ್ರಾಂಶುಪಾಲನ ವಿರುದ್ಧ ಅಹ್ರೌರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ ಆರಂಭಿಸಿದ ತನಿಖೆಯ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಿರ್ಜಾಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಬಾಲಾಪರಾಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಏತನ್ಮಧ್ಯೆ, ಪ್ರಾಂಶುಪಾಲರು ಯಾದವ್ ಅವರಿಗೆ ಕ್ಷಮೆಯಾಚಿಸಿದ್ದಾರೆ ಮತ್ತು ತಮ್ಮ ಕೃತ್ಯಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ