2013ರ ನರೇಂದ್ರ ಮೋದಿ ಪಾಟ್ನಾ ಸಮಾವೇಶದಲ್ಲಿ ಸರಣಿ ಸ್ಫೋಟ ಪ್ರಕರಣ: ನಾಲ್ವರಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಪಾಟ್ನಾ: 2013ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶದ ಸಮಯದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸರಣಿ ಬಾಂಬ್​​​ ಸ್ಫೋಟ ಪ್ರಕರಣದ ಒಂಬತ್ತು ಅಪರಾಧಿಗಳ ಪೈಕಿ ನಾಲ್ವರಿಗೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ)ದ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ.
ಕಳೆದ ವಾರ ನ್ಯಾಯಾಲಯವು 10 ಆರೋಪಿಗಳ ಪೈಕಿ ಒಂಬತ್ತು ಆರೋಪಿಗಳಾದ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ ಬ್ಯೂಟಿ’, ನಮನ್ ಅನ್ಸಾರಿ, ಮುಜಿಬುಲ್ಲಾ ಅನ್ಸಾರಿ, ಇಮ್ತಿಯಾಜ್ ಆಲಂ, ಅಹ್ಮದ್ ಹುಸೇನ್, ಫಿರೋಜ್ ಅಸ್ಲಾಂ, ಇಮ್ತಿಯಾಜ್ ಅನ್ಸಾರಿ, ಇಫ್ತಿಕರ್ ಆಲಂ ಮತ್ತು ಅಜರುದ್ದೀನ್ ಖುರೇಷಿ ದೋಷಿಗಳೆಂದು ನ್ಯಾಯಾಲಯ ಹೇಳಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಮೂರ್ತಿ ಗುರ್ವಿಂದರ್ ಸಿಂಗ್ ಅವರು, ನಾಲ್ವರು ಅಪರಾಧಿಗಳಿಗೆ ಮರಣದಂಡನೆ, ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ಇಬ್ಬರು ಅಪರಾಧಿಗಳಿಗೆ 10 ವರ್ಷ ಜೈಲು ಮತ್ತು ಒಬ್ಬ ಅಪರಾಧಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ಇಮ್ತಿಯಾಜ್ ಅನ್ಸಾರಿ, ಹೈದರ್ ಅಲಿ ಅಲಿಯಾಸ್ ಬ್ಲ್ಯಾಕ್ ಬ್ಯೂಟಿ, ನೋಮನ್ ಅನ್ಸಾರಿ ಮತ್ತು ಮುಜಿಬುಲ್ಲಾ ಅನ್ಸಾರಿ ಅವರು ಮರಣದಂಡನೆಗೆ ಗುರಿಯಾದ ನಾಲ್ವರು ಅಪರಾಧಿಗಳು. ಉಮರ್ ಸಿದ್ದಿಕಿ ಮತ್ತು ಅಜಹರುದ್ದೀನ್ ಖುರೇಶಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅಹ್ಮದ್ ಹುಸೇನ್ ಮತ್ತು ಫಿರೋಜ್ ಅಸ್ಲಾಂಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಇಫ್ತಿಕರ್ ಆಲಂಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2013ರ ಅಕ್ಟೋಬರ್ 7ರಂದು ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶದ ವೇಳೆ ಪಾಟ್ನಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 6 ಜನ ಮೃತಪಟ್ಟಿದ್ದರು ಹಾಗೂ 90ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಆದರೂ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರದ ಸಮಾವೇಶ ನಡೆಸಿದ್ದರು. ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡ ಎನ್​ಐಎ 250 ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ.ಈ 2014ರಲ್ಲಿ 11 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
ಶಿಕ್ಷೆಗೊಳಗಾದವರೆಲ್ಲರೂ ಇಂಡಿಯನ್ ಮುಜಾಹಿದ್ದೀನ್ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (SIMI) ನ ಶಂಕಿತ ಸದಸ್ಯರು.
ಅಪರಾಧಿಗಳು 7 ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸ್ಫೋಟಿಸಿದ್ದರು ಮತ್ತು 10 ಇತರೆ ಸ್ಫೋಟಗಳು ಸ್ಥಳದಲ್ಲಿ ಸ್ಫೋಟಿಸಲಿಲ್ಲ. ಎಲ್ಲಾ ಅಪರಾಧಿಗಳನ್ನು ಪ್ರಸ್ತುತ ಪಾಟ್ನಾದ ಬ್ಯೂರ್ ಜೈಲಿನಲ್ಲಿ ಇರಿಸಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement