ಭಾರತಕ್ಕೆ ದಿವಾಳಿ ಬಂಪರ್‌… ಸ್ವದೇಶಿ ನಿರ್ಮಿತ ಕೋವಿಡ್‌ ಲಸಿಕೆ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತಕ್ಕೆ ದಿವಾಳಿ ಬಂಪರ್‌… ಸ್ವದೇಶಿ ಕೋವಿಡ್‌ ಲಸಿಕೆ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ
ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಭಾರತದ ಕೊವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಕೊನೆಗೂ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಹೈದರಾಬಾದ್ ಮೂಲದ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿತ್ತು. ಈಗ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದೆ.ಅನುಮೋದನೆ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊನೆಗೂ ಕೊವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದೆ.

ಡಬ್ಲ್ಯುಎಚ್‌ಒ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ ಪೂನಂ ಸಿಂಗ್ ಅವರು ಕೋವಾಕ್ಸಿನ್‌ನ EUL ಗಾಗಿ ಭಾರತವನ್ನು ಅಭಿನಂದಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇದು ‘ಆತ್ಮನಿರ್ಭರ ಭಾರತಕ್ಕೆ ಗೆಲುವು’ ಮತ್ತು ಪ್ರಧಾನಿ ಮೋದಿಯವರ ಅಭಿಮಾನ ಮತ್ತು ಸಂಕಲ್ಪದ ಫಲ ಎಂದು ಕರೆದಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಜಿನೀವಾದಲ್ಲಿ ಜಿ 20 ಶೃಂಗಸಭೆಯ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರನ್ನು ಒತ್ತಾಯಿಸಿದ್ದರು. ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಗೆ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ಮಾಡಲು ಮುಂದಿನ ವರ್ಷ 500 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ತಯಾರಿಸಲು ಭಾರತ ಸಿದ್ಧವಾಗಿದೆ ಎಂದು ಅವರು ಹೇಳಿದರು, ಹೀಗಾಗಿ ಡಬ್ಲ್ಯುಎಚ್‌ಒ (WHO) ಭಾರತೀಯ ಲಸಿಕೆಗಳನ್ನು ಶೀಘ್ರವಾಗಿ ಅನುಮೋದಿಸುವುದು ಅವಶ್ಯಕ ಎಂದು ಅವರು ಪ್ರತಿಪಾದಿಸಿದ್ದರು.
ಭಾರತದ ಕೊವ್ಯಾಕ್ಸಿನ್‌ ಲಸಿಕೆಗೆ ಜಾಗತಿಕ ತಜ್ಞರಿಂದ ಪ್ರಶಂಸೆ ಸಿಕ್ಕಿದ್ದರೂ ವಿಶ್ವ ಆರೋಗ್ಯ ಸಂಸ್ಥೆ (WHO)ದಿಂದ ಅನುಮೋದನೆ ದೊರೆತಿರಲಿಲ್ಲ. ಈಗ ಡಬ್ಲ್ಯುಎಚ್‌ಒ ಅನುಮೋದನೆಯಿಂದ ಭಾರತದ ಕೊವ್ಯಾಕ್ಸಿನ್‌ ಲಸಿಕೆಗೆ ಇದೀಗ ಜಾಗತಿಕ ಮನ್ನಣೆ ಸಿಕ್ಕಂತಾಗಿದೆ. ಅದರಂತೆ, ಕೊವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು ಈಗ ಯಾವುದೇ ನಿರ್ಬಂಧವಿಲ್ಲದೆ ವಿದೇಶಕ್ಕೆ ತೆರಳಬಹುದಾಗಿದೆ.
ಇದಕ್ಕೂ ಮೊದಲು, ನವೆಂಬರ್ 1 ರಂದು ಆಸ್ಟ್ರೇಲಿಯಾದ ಥೆರಪೆಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್ (ಟಿಜಿಎ) ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್​ ಹೆಸರಿನ ಕೊವಿಡ್ 19 ವಿರುದ್ಧದ ಲಸಿಕೆಗೆ ಮಾನ್ಯತೆ ನೀಡಿತ್ತು. ಈ ಲಸಿಕೆಯು ಆಸ್ಟ್ರೇಲಿಯಾದಲ್ಲಿ ರಿಜಿಸ್ಟರ್ ಆಗಿಲ್ಲ. ಆದರೆ ಗಣನೀಯ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ಈ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಗುರುತಿಸಿ ಆಸ್ಟ್ರೇಲಿಯಾ ಈ ನಿರ್ಧಾರ ಕೈಗೊಂಡಿತ್ತು.
ಭಾರತ್ ಬಯೋಟೆಕ್​ನ ಕೊವ್ಯಾಕ್ಸಿನ್ ಜೊತೆಗೆ ಚೀನಾದ BBIBP- CorV ಕೂಡ ಆಸ್ಟ್ರೇಲಿಯಾದ ಪಟ್ಟಿ ಸೇರಿಕೊಂಡಿತ್ತು. ಟಿಜಿಎಯು ಇತ್ತೀಚೆಗಿನ ವಾರದಲ್ಲಿ ಕಂಡುಕೊಂಡ ಮಾಹಿತಿಯನ್ನು ಮತ್ತು ಅಂಕಿ ಅಂಶಗಳನ್ನು ಹೇಳಿದೆ. ಅದರಂತೆ, ಮೇಲೆ ಉಲ್ಲೇಖಿಸಿರುವ ಲಸಿಕೆಗಳು ಕೊರೊನಾ ಹರಡುವಿಕೆಯನ್ನು ತಡೆಗಟ್ಟುತ್ತವೆ ಎಂದು ತಿಳಿಸಿತ್ತು.
ಕೊವ್ಯಾಕ್ಸಿನ್ ಭಾರತದ ಮೊದಲ ಸ್ವದೇಶಿ ಕೊವಿಡ್ 19 ಲಸಿಕೆ ಆಗಿದೆ. ಇದನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಐಸಿಎಮ್​ಆರ್ ಮತ್ತು ಎನ್​ಐವಿ ಜೊತೆಗೂಡಿ ಈ ಲಸಿಕೆ ಸಿದ್ಧಪಡಿಸಲಾಗಿದೆ. ಮಾರಿಷಸ್, ಓಮನ್, ಫಿಲಿಫೈನ್ಸ್, ನೇಪಾಳ, ಮೆಕ್ಸಿಕೊ, ಇರಾನ್, ಶ್ರೀಲಂಕಾ, ಗ್ರೀಸ್, ಎಸ್ಟೋನಿಯಾ ಮತ್ತು ಜಿಂಬಾಬ್ವೆ ಸೇರಿದಂತೆ ಹಲವಾರು ದೇಶಗಳು ಈ ಲಸಿಕೆಗೆ ಅನುಮೋದನೆ ನೀಡಿವೆ.

ಪ್ರಮುಖ ಸುದ್ದಿ :-   15 ನಗರಗಳ ಮೇಲೆ ಗುರಿಯಿಟ್ಟಿದ್ದ ಪಾಕ್ ಡ್ರೋನ್‌ಗಳು- ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ನಾಶ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement