ವಾಯುಪಡೆ 6 ಸಿಬ್ಬಂದಿ ಸೇರಿ ಕಾನ್ಪುರದಲ್ಲಿ 25ಕ್ಕೂ ಹೆಚ್ಚು ಜನರಿಗೆ ಝಿಕಾ ವೈರಸ್ ಸೋಂಕು

ಕಾನ್ಪುರ: ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಜನರಲ್ಲಿ ಬುಧವಾರ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 14 ಮಹಿಳೆಯರು, ಆರು ವಾಯುಪಡೆಯ ಸಿಬ್ಬಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ವಿಶಾಖ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ 586 ಜನರಿಂದ ಭಾನುವಾರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಲಕ್ನೊ ನಗರದ ಪ್ರಯೋಗಾಲಯದಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಈ ಪೈಕಿ 25 ಮಾದರಿಗಳಲ್ಲಿ ಝಿಕಾ ವೈರಸ್​ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದರು.
ಗರ್ಭಿಣಿಯರು ಮತ್ತು ಜ್ವರ ಪೀಡಿತರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮನೆಮನೆಯಿಂದ ಮಾದರಿ ಸಂಗ್ರಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಝಿಕಾ ವೈರಸ್ ಸೋಂಕಿನ ಬಗ್ಗೆ ಯಾರೂ ಗಾಬರಿಯಾಗಬಾರದು ಎಂದು ಮನವಿ ಮಾಡಿರುವ ಅವರು, ವಾಯುಪಡೆ ಕೇಂದ್ರದ ಸುತ್ತಮುತ್ತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಝಿಕಾ ವೈರಸ್ ಸೋಂಕು ಉತ್ತರ ಪ್ರದೇಶದ ಕಾನ್ಪುರದಲ್ಲಿ ಅ.23ರಂದು ಮೊದಲ ಬಾರಿಗೆ ವಾಯುಪಡೆ ಅಧಿಕಾರಿಯೊಬ್ಬರಲ್ಲಿ ಕಾಣಿಸಿಕೊಂಡಿತ್ತು.

ನಿಮ್ಮ ಕಾಮೆಂಟ್ ಬರೆಯಿರಿ

advertisement