ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

ನವದೆಹಲಿ: ಚುನಾವಣಾ ಮತ ಎಣಿಕೆ ವೇಳೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಚಲಾವಣೆಯಾದ ಮತಗಳೊಂದಿಗೆ ವಿವಿ- ಪ್ಯಾಟ್‌ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ (ಏಪ್ರಿಲ್‌ 26) ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರ ಪೀಠವು ಇವಿಎಂಗಳ ಬದಲಿಗೆ ಮತಪತ್ರ ಬಳಕೆ ಮಾಡಬೇಕು ಎಂಬ ಮನವಿಯನ್ನೂ ತಿರಸ್ಕರಿಸಿದೆ. “ನಾವು ಪೇಪರ್ ಬ್ಯಾಲೆಟ್ ಮತದಾನ, ಸಂಪೂರ್ಣ EVM-VVPAT ಪರಿಶೀಲನೆ ಮತ್ತು ವಿವಿಪಿಎಟಿ (VVPAT) ಸ್ಲಿಪ್‌ಗಳ ಭೌತಿಕ ಠೇವಣಿಗಾಗಿ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇವೆ” ಎಂದು ನ್ಯಾಯಾಲಯವು ತನ್ನ ಆದೇಶವನ್ನು ಪ್ರಕಟಿಸಿತು.
ಪ್ರಜಾಪ್ರಭುತ್ವವನ್ನು ಬಲಪಡಿಸಲು ನಂಬಿಕೆ ಮತ್ತು ಸಹಯೋಗದ ಸಂಸ್ಕೃತಿಯನ್ನು ಪೋಷಿಸುವ ಅಗತ್ಯದ ಬಗ್ಗೆ ನ್ಯಾಯಾಲಯವು  ಆದೇಶದಲ್ಲಿ ಹೇಳಿದೆ.

ವಿವಿಧ ದೃಷ್ಟಿಕೋನ ಇರಬೇಕೆನ್ನುವುದು ಮುಖ್ಯ. ಆದರೆ, ಒಂದು ವ್ಯವಸ್ಥೆಯನ್ನು ಕುರುಡಾಗಿ ಸಂದೇಹಪಡುವುದು ಸಹ ತಪ್ಪಾಗುತ್ತದೆ. ನ್ಯಾಯಾಂಗವಾಗಲೀ, ಶಾಸಕಾಂಗವಾಗಲೀ ಅರ್ಥಗರ್ಭಿತ ಟೀಕೆಗಳು ಬೇಕು. ಆದರೆ ಪ್ರಜಾತಂತ್ರದ ಎಲ್ಲಾ ಸ್ತಂಭಗಳ ನಡುವೆ ವಿಶ್ವಾಸ ಇರುವುದು ಸಹ ಅಗತ್ಯ. ಈ ರೀತಿ ನಂಬಿಕೆ ಮತ್ತು ಸಹಕಾರದ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಪ್ರಜಾತಂತ್ರದ ಧ್ವನಿಯನ್ನು ಬಲಪಡಿಸಬಹುದು ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಹುಲಿ-ಕರಡಿ ಮಧ್ಯೆ "ಅಪರೂಪದ" ಮುಖಾಮುಖಿ; ಆಕ್ರಮಣಕಾರಿ ಕರಡಿಗೆ ಹುಲಿಯ ತಣ್ಣನೆಯ ಉತ್ತರ | ವೀಕ್ಷಿಸಿ

ಆದರೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಎರಡು ನಿರ್ದೇಶನಗಳನ್ನು ನೀಡಿದೆ. ಇವಿಎಂ ಮೆಷೀನ್​ಗಳಲ್ಲಿ ಚಿಹ್ನೆ ನಮೂದಾದ ಬಳೀಕ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು. ಫಲಿತಾಂಶಗಳ ಘೋಷಣೆಯ ನಂತರ ಸಿಂಬಲ್ ಲೋಡಿಂಗ್ ಯೂನಿಟ್ ಅನ್ನು ಒಳಗೊಂಡಿರುವ ಸೀಲ್ ಮಾಡಿದ ಕಂಟೈನರ್‌ಗಳನ್ನು ಇವಿಎಂಗಳ ಜೊತೆಗೆ ಕನಿಷ್ಠ 45 ದಿನಗಳ ಕಾಲ ಸ್ಟೋರ್‌ರೂಮ್‌ಗಳಲ್ಲಿ ಇಡಬೇಕು ಎಂದು ನ್ಯಾಯಾಲಯ ಹೇಳಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅಭ್ಯರ್ಥಿಗಳು ವಿವಿಪ್ಯಾಟ್ ಕ್ರಾಸ್ ವೆರಿಫಿಕೇಶನ್​ಗೆ ಮನವಿ ಮಾಡಿದರೆ ಇವಿಎಂ ಯಂತ್ರದಲ್ಲಿರುವ ಮೈಕ್ರೋಕಂಟ್ರೋಲ್​ನಲ್ಲಿನ ಬರ್ನ್ಟ್ ಮೆಮೊರಿಯನ್ನು ತಂತ್ರಜ್ಞರ ತಂಡವೊಂದು ಪರಿಶೀಲನೆ ನಡೆಸಲು ಅವಕಾಶ ಕೊಡಬೇಕು. ಇದರ ವೆಚ್ಚವನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ. ಒಂದು ವೇಳೆ ಇವಿಎಂ ತಿರುಚಲಾಗಿರುವುದು ಗೊತ್ತಾದರೆ ಅಭ್ಯರ್ಥಿಗೆ ಆ ಹಣ ರೀಫಂಡ್ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement