ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಡೀಸೆಲ್, ಪೆಟ್ರೋಲ್ ದರ ಕಡಿಮೆ ಮಾಡಿದ್ದು ಇತಿಹಾಸದಲ್ಲಿ ಇದೇ ಮೊದಲು : ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯಾದ್ಯಂತ ಇಂದು ಸಂಜೆಯಿಂದಲೇ ಅನ್ವಯವಾಗುವಂತೆ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ದರದಲ್ಲಿ 7 ರೂ. ಕಡಿತವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಿನ್ನೆಯಷ್ಟೇ ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ದರವನ್ನು 10 ರೂ. ಹಾಗೂ ಪೆಟ್ರೋಲ್ ದರವನ್ನು 5 ರೂ. ಇಳಿಸಿತ್ತು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಇದೀಗ ರಾಜ್ಯ ಸರ್ಕಾರ ಕೂಡ ಪ್ರತಿ ಲೀಟರಿಗೆ 7 ರೂ. ಕಡಿತ ಮಾಡಿದೆ.ದೇಶದ ಜನತೆಗೆ ಕೇಂದ್ರ ಸರ್ಕಾರ ದೀಪಾವಳಿ ಹಬ್ಬದ ಕೊಡುಗೆಯಾಗಿ ಪ್ರತಿ ಲೀಟರ್ ಡೀಸೆಲ್‍ಗೆ ರೂ. 10 ಹಾಗೂ ಪೆಟ್ರೋಲ್‍ಗೆ 5 ರೂ. ಇಳಿಕೆ ಮಾಡಿತ್ತು.ನಾನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಷಾ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಎಲ್ಲ ರಾಜ್ಯಗಳಲೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ತಕ್ಷಣವೇ ನಾನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಮಾರಾಟ ದರವನ್ನು 7 ರೂ.ಗೆ ಕಡಿತ ಮಾಡಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಇತಿಹಾಸದಲ್ಲೇ ಯಾವುದೇ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ದರವನ್ನು ಕಡಿಮೆ ಮಾಡಿರಲಿಲ್ಲ ಎಂದ ಅವರು
ಸರ್ಕಾರದ ಈ ತೀರ್ಮಾನದಿಂದಾಗಿ ಬೊಕ್ಕಸಕ್ಕೆ ಅಂದಾಜು 2100 ಕೋಟಿ ಹೊರೆಯಾಗಲಿದೆ. ಆದರೂ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇದು ನಮ್ಮ ಸರ್ಕಾರ ದೀಪಾವಳಿ ಹಬ್ಬಕ್ಕೆ ಜನತೆಗೆ ಕೊಡುತ್ತಿರುವ ಉಡುಗೊರೆಯಾಗಿದೆ ಎಂದರು.
ಇದೇ 26ರಂದು ಮನೆ ಬಾಗಿಲಿಗೆ ಜನಸೇವಕ:
ಪಡಿತರ ಧಾನ್ಯ ಸೇರಿದಂತೆ ಸರ್ಕಾರದ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜನಸೇವಕ ಯೋಜನೆ ಇದೇ ತಿಂಗಳ 26ರಂದು ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈಗಾಗಲೇ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಸರ್ಕಾರದ ಸೇವೆಗಳು ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವರಿಗೆ ತರಬೇತಿಯನ್ನು ನೀಡಲಾಗಿದೆ. ಇದೇ ರೀತಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ತರಬೇತಿ ನೀಡಬೇಕು. ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು. ಮನೆಗೆ ತೆರಳಿದಾಗ ಆಧಾರ್ ಕಾರ್ಡ್ ಪರಿಶೀಲನೆ, ಗುರುತಿನಚೀಟಿ, ಲ್ಯಾಪ್‍ಟಾಪ್ ಬಳಕೆ ಸೇರಿದಂತೆ ನಾನಾ ರೀತಿಯ ತಾಂತ್ರಿಕ ಕಾರಣಗಳಿವೆ. ಹೀಗಾಗಿ ತುಸು ವಿಳಂಬವಾಗಿದೆ ಎಂದು ತಿಳಿಸಿದರು

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement