ನಮ್ಮ ಸೈನಿಕರೇ ಭಾರತ ಮಾತೆಗೆ ಸುರಕ್ಷಾ ಕವಚ; ಸೈನಿಕರ ಜೊತೆ ದೀಪಾವಳಿ ಆಚರಿಸಲು ಬಂದ ಪ್ರಧಾನಿ ಮೋದಿ ಬಣ್ಣನೆ

ಸೈನಿಕರ ಜೊತೆ ದೀಪಾವಳಿ ಆಚರಿಸಲು ಕಾಶ್ಮೀರದ ರಜೌರಿ ನೌಶೇರಾ ಸೆಕ್ಟರ್‌ಗೆ ಬಂದಿಳಿದ ಪ್ರಧಾನಿ ಮೋದಿ
ನವದೆಹಲಿ: ನಮ್ಮ ದೇಶದ ಸೈನಿಕರು ಭಾರತ ಮಾತೆಗೆ ಸುರಕ್ಷಾ ಕವಚದಂತಿದ್ದಾರೆ. ಅವರು ಭಾರತಾಂಬೆಗೆ ಯಾರಿಂದಲೂ ಯಾವುದೇ ತೊಂದರೆಯಾಗಲು ಬಿಡುವುದಿಲ್ಲ. ನಾನಿಂದು ಒಬ್ಬನೇ ಇಲ್ಲಿಗೆ ಬಂದಿಲ್ಲ. ನನ್ನೊಂದಿಗೆ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ಸೈನಿಕರಿಗಾಗಿ ಹೊತ್ತು ತಂದಿದ್ದೇನೆ. ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಮ್ಮು ಕಾಶ್ಮೀರದ ಗಡಿಯಲ್ಲಿರುವ ರಾಜೌರಿಯಲ್ಲಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿರುವ ನೌಶೇರಾ ಸೆಕ್ಟರ್‌ನಲ್ಲಿ ಇಂದು ಪ್ರಧಾನಿ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ನನ್ನ ಎದುರು ಕೆಚ್ಚೆದೆಯ ಸೋದರರು- ಸೋದರಿಯರಿದ್ದೀರಿ. ನಿಮ್ಮ ಮಾತೃಭೂಮಿಗಾಗಿ ತಮ್ಮ ತಾಯ್ನಾಡನ್ನು ಕಾಪಾಡಲೇಬೇಕೆಂಬ ಹಠ, ಬದ್ಧತೆ ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿದೆ. ನಿಮ್ಮಿಂದಾಗಿಯೇ ನಾವಿಂದು ನಿಶ್ಚಿಂತೆಯಿಂದ ನಿದ್ರೆ ಮಾಡುತ್ತಿದ್ದೇವೆ, ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಭಾರತೀಯ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈಗ ಮಹಿಳೆಯರಿಗೆ ಕೂಡ ಭಾರತೀಯ ಸೇನೆಯಲ್ಲಿ ಅವಕಾಶ ನೀಡಲಾಗಿದೆ. ದೇಶದ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ಮತ್ತೊಮ್ಮೆ ಸಾಬೀತುಪಡಿಸುವ ಸಮಯ ಬಂದಿದೆ. ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಂದು ಮುಂಜಾನೆಯೇ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸುವ ಸಲುವಾಗಿ ಅವರು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ಗೆ ಬಂದಿದ್ದಾರೆ. ನಂತರ, ಅವರು ಉನ್ನತ ಸೇನಾ ಅಧಿಕಾರಿಗಳು ಮತ್ತು ಇತರ ಸೈನಿಕರನ್ನು ಭೇಟಿಯಾದರು.
ಅವರು ಗುರುವಾರ ಬೆಳಗ್ಗೆ 10:30 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯ ನೌಶೇರಾ ಸೆಕ್ಟರ್‌ನ ಮುಂಭಾಗದ ಪ್ರದೇಶವನ್ನು ತಲುಪಿದರು ಮತ್ತು ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಗಡಿ ಹೊರಠಾಣೆಗಳಿಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಇದೇ ಮೊದಲಲ್ಲ. 2014 ರಲ್ಲಿ ಅವರು ಪ್ರಧಾನಿಯಾದಾಗಿನಿಂದ, ಅವರು ದೀಪಾವಳಿಯಂದು ಗಡಿ ಔಟ್‌ಪೋಸ್ಟ್‌ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಅವರು ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ 2019 ರಲ್ಲೂ ರಾಜೌರಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಬುಧವಾರ, ಪ್ರಧಾನಿ ಮೋದಿ ಅವರ ಭೇಟಿಯ ಮೊದಲು, ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಮುಂಚೂಣಿ ಪ್ರದೇಶಗಳ ವೈಮಾನಿಕ ವೀಕ್ಷಣೆ ನಡೆಸಿದರು ಮತ್ತು ಜಮ್ಮು ಪ್ರದೇಶದಲ್ಲಿನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಬೆಳಗ್ಗೆ ಪ್ರಧಾನಿ ಮೋದಿ ಅವರು ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶದ ನಾಗರಿಕರಿಗೆ ಶುಭಾಶಯ ಕೋರಿದರು. “ದೀಪಾವಳಿಯ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ಈ ಬೆಳಕಿನ ಹಬ್ಬ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು” ಎಂದು ಅವರು ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತವು ಗುರುವಾರ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ. ಇಡೀ ದೇಶವೇ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದರೂ, ವಾಯು ಮಾಲಿನ್ಯದ ಭೀತಿಯಿಂದಾಗಿ ಭಾರತದ ಕೆಲವು ಭಾಗಗಳಲ್ಲಿ ಪಟಾಕಿಗಳ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement