ಪೆಟ್ರೋಲ್-ಡೀಸೆಲ್ ಬೆಲೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ ಕೇಂದ್ರ: ಅಡುಗೆ ಎಣ್ಣೆ ದರ 20 ರೂ. ವರೆಗೆ ಇಳಿಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತರ ದೇಶದ ಜನತೆಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಅಡುಗೆ ಎಣ್ಣೆ ದರದಲ್ಲಿ ಗಣನೀಯ ಇಳಿಕೆ ಮಾಡಿದೆ.
ಕೆಲ ತಿಂಗಳಿನಿಂದ ಗಗನಕ್ಕೇರಿದ್ದ ಅಡುಗೆ ಎಣ್ಣೆ ದರದಲ್ಲಿ ಕೇಂದ್ರ ಸರ್ಕಾರ ಈಗ ಗಣನೀಯ ಇಳಿಕೆ ಮಾಡಿದ್ದು, ಪ್ರತೀ ಲೀಟರ್ ಎಣ್ಣೆ ದರದಲ್ಲಿ ಬರೊಬ್ಬರಿ 20ರೂ ಗಳ ವರೆಗೂ ಇಳಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದು, ‘ಕೇಂದ್ರ ಸರ್ಕಾರದ ಹಲವಾರು ಕ್ರಮಗಳಿಂದ ಖಾದ್ಯ ತೈಲದ ಚಿಲ್ಲರೆ ಬೆಲೆಗಳು ಗಣನೀಯವಾಗಿ ಕುಸಿದಿವೆ. ತಾಳೆ, ಶೇಂಗಾ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ತೈಲಗಳ ಬೆಲೆಗಳು ಕುಸಿದಿವೆ ಎಂದು ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಅಡುಗೆ ತೈಲ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಚ್ಚಾ ಪಾಮ್ ಆಯಿಲ್, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಶೇಕಡಾ 2.5 ರಿಂದ ಶೂನ್ಯಕ್ಕೆ ಕಡಿತಗೊಳಿಸಿದೆ. ಪರಿಣಾಮ ಹಬ್ಬದ ಋತುವಿನಲ್ಲಿ ಖಾದ್ಯ ತೈಲಗಳ ಬೆಲೆಯಲ್ಲಿ ಧನಾತ್ಮಕ ಪ್ರವೃತ್ತಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ ಎಂದು ಹೇಳಿದರು.
ಈ ತೈಲಗಳ ಮೇಲಿನ ಕೃಷಿ-ಸೆಸ್ ಅನ್ನು ಕಚ್ಚಾ ಪಾಮ್ ಆಯಿಲ್‌ಗೆ ಶೇಕಡಾ 20 ರಿಂದ ಶೇಕಡಾ 7.5 ಕ್ಕೆ ಮತ್ತು ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇಕಡಾ 5 ಕ್ಕೆ ಇಳಿಸಲಾಗಿದೆ. ಮೇಲಿನ ಕಡಿತದ ಪರಿಣಾಮವಾಗಿ, ಕಚ್ಚಾ ಪಾಮ್ ಆಯಿಲ್‌ಗೆ ಒಟ್ಟು ಸುಂಕವು ಶೇಕಡಾ 7.5 ಮತ್ತು ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇಕಡಾ 5 ರಷ್ಟಿದೆ. ಆರ್‌ಬಿಡಿ ಪಾಮೊಲಿನ್ ಎಣ್ಣೆ, ಸಂಸ್ಕರಿಸಿದ ಸೋಯಾಬೀನ್ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಈ ಹಿಂದಿನ ಶೇ.32.5ರಿಂದ ಶೇ. 17 ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು.
ಈಗ ಖಾದ್ಯ ತೈಲ ಬೆಲೆಗಳು ಪ್ರತಿ ಕೆಜಿಗೆ 20 ರೂ.ವರೆಗೂ ದರ ಕಡಿಮೆಯಾಗಿದ್ದು, ಶೇಂಗಾ ಎಣ್ಣೆ, ಸೋಯಾಬೀನ್ ಎಣ್ಣೆ, ಪಾಮ್ ಆಯಿಲ್, ಸೂರ್ಯಕಾಂತಿ ಎಣ್ಣೆ ಸೇರಿದಂತೆ ಬಹುತೇಕ ಅಡುಗೆ ಎಣ್ಣೆಗಳ ಇಳಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಿದ್ದು, ಅಡುಗೆ ಎಣ್ಣೆ ದರ 7ರಿಂದ 20 ರೂ.ಗಳ ವರೆಗೆ ಇಳಿಕೆಯಾಗಿದೆ. ಖಾದ್ಯ ತೈಲ ಬೆಲೆಗಳು ಹಲವು ಸ್ಥಳಗಳಲ್ಲಿ 20 ರೂ., 18 ರೂ., 10 ರೂ., 7 ರೂ.ಗಳಷ್ಟು ಇಳಿಕೆಯಾಗಿದೆ. ತಾಳೆ ಎಣ್ಣೆ, ಕಡಲೆಕಾಯಿ, ಸೋಯಾಬೀನ್, ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ಎಣ್ಣೆಗಳ ಬೆಲೆ ಕುಸಿತ ಕಂಡಿದೆ ಎಂದು ಸುಧಾಂಶು ಪಾಂಡೆ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement