ಪಾಟ್ನಾ: ಕಳ್ಳಬಟ್ಟಿ ಸೇವಿಸಿ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ 16 ಹಾಗೂ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ 8 ಸೇರಿದಂತೆ ಒಟ್ಟು 24 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ಜನರು ಅಸ್ವಸ್ಥಗೊಂಡಿದ್ದಾರೆ.
ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದ್ದರೂ ಈ ದುರ್ಘಟನೆ ಸಂಭವಿಸಿದ್ದು, ಪಶ್ಚಿಮ ಚಂಪಾರಣ್ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಬೆಟ್ಟಯಾ ಸಮೀಪದ ತೆಲ್ಹುವಾ ಗ್ರಾಮದಲ್ಲಿ ನವೆಂಬರ್ 4 ರಂದು ಕಳ್ಳಬಟ್ಟಿ ಸೇವಿಸಿ ಎಂಟು ಮಂದಿ ಅಸು ನೀಗಿದ್ದಾರೆ. ಗೋಪಾಲ್ಗಂಜ್ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ನವೆಂಬರ್ 4 ರಂದು ಕಳ್ಳಬಟ್ಟಿ ಸೇವನೆಯಿಂದ ಮೃತಪಟ್ಟವರ ಸಂಖ್ಯೆಯು 16ಕ್ಕೆ ಏರಿದೆ.
ಗೋಪಾಲ್ಗಂಜ್ಗೆ ಸಚಿವ ಜನಕ್ ರಾಮ್ ಧಾವಿಸಿದ್ದಾರೆ. ‘ನಾನು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತನಾಡಿದೆ. ಅವರು ಕಳ್ಳಬಟ್ಟಿ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲು ಯಾವುದೇ ಆಧಾರವಿಲ್ಲ. ಎನ್ಡಿಎ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ನಡೆಯುತ್ತಿರುವ ಷಡ್ಯಂತ್ರ ಇದಾಗಿರಬಹುದು ಎಂದು ಅವರು ಪ್ರತಿಕ್ರಿಯಿಸಿದರು.
ಮೇಲ್ನೋಟಕ್ಕೆ ಈ ಸಾವುಗಳು ಯಾವುದೋ ವಿಷಕಾರಿ ಪದಾರ್ಥ ಸೇವನೆಯಿಂದ ಸಂಭವಿಸಿರುವುದು ಕಂಡುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನವೆಂಬರ್ 2 ಮತ್ತು 3 ರ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ 20 ಕ್ಕೂ ಹೆಚ್ಚು ವ್ಯಕ್ತಿಗಳು ಈ ಪ್ರದೇಶದಲ್ಲಿ ಸ್ಥಳೀಯ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದ ನಕಲಿ ಮದ್ಯವನ್ನು ಸೇವಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಗುರುತಿಸಿದ್ದಾರೆ.
ತೆಲ್ಹುವಾ ಕಳ್ಳಬಟ್ಟಿ ದುರಂತವು ಉತ್ತರ ಬಿಹಾರದಲ್ಲಿ ಕಳೆದ 10 ದಿನಗಳಲ್ಲಿ ನಡೆದ ಮೂರನೇ ಘಟನೆಯಾಗಿದೆ.
ನಿತೀಶ್ ಕುಮಾರ್ ನೇತೃತ್ವದ ಬಿಹಾರದ ಜೆಡಿಯು ಸರ್ಕಾರವು ಏಪ್ರಿಲ್ 5, 2016ರಂದು ರಾಜ್ಯದಲ್ಲಿ ಮದ್ಯ ತಯಾರಿಕೆ, ಮಾರಾಟ, ದಾಸ್ತಾನು, ಸಾಗಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.
ರಾಜ್ಯ ಸರ್ಕಾರವು ಮದ್ಯ ನಿಷೇಧವನ್ನು ಸರಿಯಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಮರಣೋತ್ತರ ಪರೀಕ್ಷೆಗೆ ಮೊದಲೇ ಪೊಲೀಸರು ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡುತ್ತಿದ್ದಾರೆ. ಮುಖ್ಯಮಂತ್ರಿ ಈ ದುರಂತದ ಹೊಣೆ ಹೊರಬೇಕು ಎಂದು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಸರ್ಕಾರವನ್ನು ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ