ನಾನು ಕೇದಾರನಾಥದ​ ಆದಿ ಶಂಕರಾಚಾರ್ಯರ ಮೂರ್ತಿ ನೋಡಬೇಕು, ನಾನು ಶೃಂಗೇರಿ ಮಠದ ಭಕ್ತ ; ಪ್ರಶಂಸಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು: ನನಗೆ ನೀವು (ಪ್ರಧಾನ ಮಂತ್ರಿ ನರೇಂದ್ರ ಮೋದಿ) ಕೇದಾರನಾಥದಲ್ಲಿ ಉದ್ಘಾಟಿಸಿದ ಶ್ರೀ ಆದಿಶಂಕರಾಚಾರ್ಯರ ಕಪ್ಪು ಕಲ್ಲಿನ ಸುಂದರ ಮೂರ್ತಿಯನ್ನು ನೋಡಬೇಕು ಅನಿಸಿದೆ. ಈ ಪವಿತ್ರ ಕ್ಷೇತ್ರವನ್ನು ಪುನರ್​ನಿರ್ಮಾಣ ಮಾಡುವಲ್ಲಿ ನೀವು ಕೈಗೊಂಡ ಕಾರ್ಯಗಳಿಗಾಗಿ ನಾನು ನಿಮಗೆ ಶುಭಾಶಯ ಕೋರುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಪ್ರಶಂಸಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಇಂದು (ಶನಿವಾರ) ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಅವರು, ನಾನು ಕರ್ನಾಟಕದಲ್ಲಿನ ಚಿಕ್ಕಮಗಳೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಮತ್ತು ಶೃಂಗೇರಿ ಮಠದ ಭಕ್ತನಾಗಿದ್ದೇನೆ. ನಿಮಗೆ ತಿಳಿದಿರುವಂತೆ ಅದು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ನಾಲ್ಕು ಕೇಂದ್ರಗಳಲ್ಲಿ ಒಂದಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಶೃಂಗೇರಿ ಮಠವು ಶತಮಾನಗಳಿಂದ ದೇಶಕ್ಕೆ ಅಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ. ವಿವಿಧ ರಾಜರ, ಆಡಳಿತಗಾರರ ಜೊತೆಗೆ ಧಾರ್ಮಿಕ ಕೇಂದ್ರವಾಗಿ ಒಗ್ಗೂಡಿಸಿಕೊಂಡು ಹೋಗಿದೆ ಎಂಬುದು ಈ ಮಠದ ವಿಶೇಷ ಎಂದು ದೇವೇಗೌಡ ಶೃಂಗೇರಿ ಮಠದ ಬಗ್ಗೆ ಬರೆದಿದ್ದಾರೆ.
ಪೇಶ್ವೆಗಳು, ಕೆಳದಿ ಮತ್ತು ತಿರುವಾಂಕೂರು, ಒಡೆಯರ್, ಆಳ್ವಿಕೆಯು ಮಠದಿಂದ ಲಾಭಾಂಶ ಪಡೆದುಕೊಂಡಿವೆ. ಮೈಸೂರು ರಾಜರಾದ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನ್ ಮತ್ತು ಹೈದರಾಬಾದ್​ನ ನಿಜಾಮರು ಕೂಡ ಈ ಧಾರ್ಮಿಕ ಸ್ಥಳದಿಂದ ಒಳಿತನ್ನು ಪಡೆದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಧರ್ಮ ಕ್ಷೇತ್ರದ ಅದ್ಭುತ ಮಾರ್ಗದರ್ಶನವು ಇಂದಿನ ದಿನದ ವರೆಗೂ ಮುಂದುವರಿದುಕೊಂಡು ಬಂದಿದೆ. ಶೃಂಗೇರಿ ಮಠ, ವೈಯಕ್ತಿಕವಾಗಿ ನನಗೆ ಸಮಾಜ ಹಾಗೂ ವಿವಿಧ ರ್ಮಗಳ ಸಾಮರಸ್ಯದ ಕೇಂದ್ರವಾಗಿ ಕಂಡಿದೆ. ಇಲ್ಲಿನ ದೇವರ ಪವಿತ್ರ ಸನ್ನಿಧಿಯಿಂದ ನನ್ನ ಜೀವನದಲ್ಲಿ ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದು ದೇವೇಗೌಡ ಪತ್ರದಲ್ಲಿ ತಿಳಿಸಿದ್ದಾರೆ.
ಶೀಘ್ರವೇ ಕೇದಾರನಾಥಕ್ಕೆ ಭೇಟಿ ಕೊಟ್ಟು, ಹೊಸತಾಗಿ ಉದ್ಘಾಟಿಸಿರುವ ಶಂಕರಾಚಾರ್ಯರ ಪ್ರತಿಮೆ ನೋಡಬೇಕು ಎಂದು ನಾನು ಕಾತುರನಾಗಿದ್ದೇನೆ. ಆ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬವರು ರಚಿಸಿದ್ದಾರೆ ಎಂಬುದು ಸಂತೋಷಕ್ಕೆ ಹೆಚ್ಚಿನ ಕಾರಣವಾಗಿದೆ. ಪ್ರತಿಮೆ ರಚನೆಗೆ ಬಳಸಿದ ಕಪ್ಪು ಶಿಲೆ ಮೈಸೂರಿನ ಹೆಚ್​.ಡಿ. ಕೋಟೆಯದ್ದು ಎಂದು ತಿಳಿದುಕೊಂಡಿದ್ದೇನೆ. ಈ ಕಾರ್ಯದಲ್ಲಿ ಕರ್ನಾಟಕದ ಭಾಗವೂ ಬಹಳಷ್ಟಿದೆ. ಭಗವಂತನ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ದೇವೇಗೌಡರು ಮೋದಿಗೆ ಶುಭ ಹಾರೈಸಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement