ಕರ್ನಾಟಕದ 650 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್​ ರಾಜ​ಕುಮಾರ್​ಗೆ ಶ್ರದ್ಧಾಂಜಲಿ

ಬೆಂಗಳೂರು: ಇತ್ತೀಚಿಗೆ ನಿಧನರಾದ ಪುನೀತ್​ ರಾಜ್​ಕುಮಾರ್‌ ಸ್ಮರಣಾರ್ಥ ರಾಜ್ಯದ ಎಲ್ಲಾ 650 ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಸಂಜೆ 6 ಗಂಟೆಗೆ ಪುನೀತ್ ರಾಜ್​​ಕುಮಾರ್​​ಗೆ ವಿಶೇಷ ಹಾಡನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಎಲ್ಲ ಥಿಯೆಟರ್‌ಗಳಲ್ಲಿ ಪ್ರದರ್ಶಕರ ವಲಯ ಮತ್ತು ಥಿಯೇಟರ್ ಸಿಬ್ಬಂದಿ ಪುನೀತ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ದೀಪ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಮೇಣದಬತ್ತಿ ಹಚ್ಚಿ, ದೀಪ ಬೆಳಗಲಾಯಿತು.
ಗೀತ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿದ ಹಾಡಿನ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ಪುನೀತ್​ ಅವರನ್ನು ನೆನೆದು ಎಲ್ಲರೂ ಕಣ್ಣೀರು ಹಾಕಿದ್ದಾರೆ. ಇನ್ನು, ಈ ವೇಳೆ ನೂರಾರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದವರು ಪುನೀತ್​ ರಾಜ್​ಕುಮಾರ್​. ಹೃದಯಾಘಾತದಿಂದ ನಿಧನರಾದ ಬಳಿಕ ಅಪಾರ ಸಂಖ್ಯೆಯ ಅಭಿಮಾನಿ ಬಳಗಕ್ಕೆ ತೀವ್ರ ನೋವಾಗಿದೆ. ಪುನೀತ್​ ಅವರ ಸಿನಿಮಾಗಳನ್ನು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುತ್ತಿದ್ದರು.
ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಪುನೀತ್​ ರಾಜ್​ಕುಮಾರ್​ ಸಮಾಧಿಗೆ ಪ್ರತಿ ದಿನ ಭಾರಿ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement