ಕಲಬುರಗಿ ಪಾಲಿಕೆಯಲ್ಲಿ ಮೇಯರ್- ಉಪಮೇಯರ್ ಚುನಾವಣೆ ನವೆಂಬರ್‌ 20ಕ್ಕೆ ನಿಗದಿ : ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್‌ ಕಿಂಗ್‌ ಆಗುತ್ತದೆಯೋ ಕಿಂಗ್‌ ಮೇಕರೋ..?

ಕಲಬುರಗಿ: ಅತಂತ್ರ ಫಲಿತಾಂಶದಿಂದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮತ್ತು ಸ್ಥಾಯಿ ಸಮಿತಿಗಳ ಚುನಾವಣೆಗೆ ನವೆಂಬರ್ 20 ಕ್ಕೆ ಮುಹೂರ್ತ ನಿಗದಿಯಾಗಿದೆ.
ನವೆಂಬರ್ 20 ರಂದು ಮಧ್ಯಾಹ್ನ 12.30 ಕ್ಕೆ ಟೌನ್ ಹಾಲ್ ಸಭಾಂಗಣದಲ್ಲಿ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ ಪ್ರಸಾದ ಅಧಿಸೂಚನೆ ಹೊರಡಿಸಿದ್ದಾರೆ. ಮೇಯರ್ ಸ್ಥಾನವು ಸಾಮಾನ್ಯವರ್ಗದ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನವು ಹಿಂದುಳಿದ ಪ್ರವರ್ಗ ( ಬ) ಕ್ಕೆ ಮೀಸಲಾಗಿದೆ
ಅತಂತ್ರ ಫಲಿತಾಂಶ ಬಂದಿದ್ದರಿಂದ ಮೇಯರ್‌ ಹಾಗೂ ಉಪೇಮಯರ್‌ ಯಾರು ಮತ್ತು ಯಾವ ಪಕ್ಷದವರು ಆಗುತ್ತಾರೆಂಬ ಕುತೂಹಲ ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿದೆ. ಮೇಯರ್ ಹುದ್ದೆಗೆ ಏರುವವರಿಗೆ ಏರಲು 32 ಸದಸ್ಯರ ಬೆಂಬಲದ ಅಗತ್ಯವಿದೆ.
ಮಹಾನಗರ ಪಾಲಿಕೆಯ ಒಟ್ಟು ಸದಸ್ಯರ ಸಂಖ್ಯೆ 55. ಕಾಂಗ್ರೆಸ್ ನಿಂದ 27 ಸದಸ್ಯರು ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕಿ ಖನೀಜ್ ಫಾತಿಮಾಕೂಡ ಮತದಾನದ ಹಕ್ಕು ಹೊಂದಿದ್ದು, ಹೀಗಾಗಿ ಕಾಂಗ್ರೆಸ್‌ ಸಂಖ್ಯಾಬಲ 29 ಆಗಲಿದೆ. ಮೇಯರ್ ಸ್ಥಾನ ಪಡೆಯಲು ಕಾಂಗ್ರೆಸ್‍ಗೆ ಇನ್ನೂ 3 ಮತಗಳ ಅಗತ್ಯವಿದೆ.
ಬಿಜೆಪಿಯಿಂದ ಒಟ್ಟು 23 ಸದಸ್ಯರು ಆಯ್ಕೆಯಾಗಿದ್ದು, ಲೋಕಸಭಾ ಸದಸ್ಯ ಡಾ .ಉಮೇಶ ಜಾಧವ, ಇಬ್ಬರು ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಇಬ್ಬರು ವಿಧಾನ ಪರಿಷತ್‌ ಸದಸ್ಯರಾದ ಬಿ. ಜಿ. ಪಾಟೀಲ ಮತ್ತು ಶಶೀಲ ನಮೋಶಿ ಮತದಾನದ ಹಕ್ಕು ಹೊಂದಿದ್ದಾರೆ. ಓರ್ವ ಪಕ್ಷೇತರ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಬಿಜೆಪಿ ಸೇರಿದ್ದರಿಂದ ಬಿಜೆಪಿ ಸಂಖ್ಯಾಬಲವೂ 29 ಆಗಲಿದೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಬಲ ಸಾಧಿಸಿದಂತಾಗಿದೆ. ಅಧಿಕಾರದ ಸೂತ್ರ ಹಿಡಿಯಲು ಕಾಂಗ್ರೆಸ್‌ನಂತೆಯೇ ಬಿಜೆಪಿಗೂ ಮೂವರು ಸದಸ್ಯರ ಬೆಂಬಲ ಬೇಕಾಗುತ್ತದೆ.
ಜೆಡಿಎಸ್ ಈಗ ಕಿಂಗ್‌ ಮೇಕರ್ ಅಥವಾ ಕಿಂಗ್‌..?
ಕಲಬುರಗಿ ಪಾಲಿಕೆಯ ಅತಂತ್ರ ಸ್ಥಿತಿಯಲ್ಲಿ ಜೆಡಿಎಸ್‌ ಕಿಂಗ್‌ ಆಗುತ್ತದೆಯೋ ಅಥವಾ ಕಿಂಗ್‌ ಮೇಕರ್‌ ಆಗುತ್ತದೆಯೋ ಎಂಬುದು ಕುತೂಹಲ ಮೂಡಿಸಿದೆ. ಜೆಡಿಎಸ್‌ ನಾಲ್ಕು ಸದಸ್ಯರನ್ನು ಹೊಂದಿದೆ. ಆದರೆ ಅತಂತ್ರ ಸ್ಥಿತಿಯಲ್ಲಿ ಈಗ ಜೆಡಿಎಸ್‌ ಯಾರಿಗೆ ಬೆಂಬಲಿಸುತ್ತದೆಯೋ ಅವರಿಗೆ ಅಧೀಕಾರದ ಗದ್ದು ಸಿಗಲಿದೆ. ಆದರೆ ಜೆಡಿಎಸ್ ಬೆಂಬಲ ಯಾರಿಗೆ ಎಂಬುದು ನಿಗೂಢವಾಗಿಯೇ ಉಳಿದಿದೆ.
ಉಭಯ ಪಕ್ಷಗಳ ನಾಯಕರು ಜೆಡಿಎಸ್ ನಾಯಕರ ಸಂಪರ್ಕದಲ್ಲಿದ್ದು ಯಾರಿಗೆ ಜೆಡಿಎಸ್ ಕೃಪಾಕಟಾಕ್ಷ ದೊರೆಯಲಿದೆ ಎಂಬುದು ಕಾದು ನೋಡಬೇಕಿದೆ

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement