ಕಿತ್ತೂರು ಕರ್ನಾಟಕ ನಾಮಕರಣ ಐತಿಹಾಸಿಕ ನಿರ್ಧಾರ : ಸೋಮಣ್ಣವರ

ಬೆಳಗಾವಿ : ಮುಂಬೈ ಕರ್ನಾಟಕ ಹೆಸರು ಬದಲಿಸಿ ಕಿತ್ತೂರು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಐತಿಹಾಸಿಕ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಡಾ. ಎಸ್.ಬಿ.ಸೋಮಣ್ಣವರ ಶ್ಲಾಘಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಬೆಳಗಾವಿ ಕಂದಾಯ ವಿಭಾಗದ 7 ಜಿಲ್ಲೆಗಳನ್ನು ಇದುವರೆಗೆ ಮುಂಬೈ ಕರ್ನಾಟಕ ಎಂದೇ ಕರೆಯಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಇಂದಿನ ಸಂಪುಟ ಸಭೆಯಲ್ಲಿ ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡಿರುವ ನಿರ್ಣಯ ಬಸವರಾಜ ಬೊಮ್ಮಾಯಿ ಸರಕಾರದ ದಿಟ್ಟ ತೀರ್ಮಾನ ಎಂದು ಅವರು ಹೇಳಿದ್ದಾರೆ.
ಮುಂಬೈ ಕರ್ನಾಟಕ ಹೆಸರು ಬದಲಿಗೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವ ಬೇಡಿಕೆ ಇಂದು ನಿನ್ನೆಯದಲ್ಲ. ಹಿರಿಯ ಸಂಶೋಧಕ
ದಿ. ಡಾ. ಚಿದಾನಂದಮೂರ್ತಿ ಅವರ ಕನಸನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊನೆಗೂ ನನಸು ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿದಾನಂದಮೂರ್ತಿ ಅವರನ್ನು ನೆನಪಿಸಿಕೊಳ್ಳ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಮರು ನಾಮಕರಣಕ್ಕೆ ಶ್ರಮಿಸಿದ ನಾಡಿನ ಎಲ್ಲಾ ರಾಜಕೀಯ ಧುರೀಣರಿಗೆ ಹಾಗೂ ಕಿತ್ತೂರು ಮತಕ್ಷೇತ್ರದ ಶಾಸಕ ಮಹಾಂತೇಶ ದೊಡಗೌಡರ ಅವರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆತಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಇದೀಗ ಕಿತ್ತೂರು ಕರ್ನಾಟಕ ಭಾಗದ ಸಮಗ್ರ ಏಳ್ಗೆಗೆ ಮುಂದಾಗಬೇಕು. ಈ ಭಾಗದಲ್ಲಿ ಕೃಷಿ, ಉದ್ದಿಮೆ, ಔದ್ಯೋಗಿಕರಣ, ಐಟಿಬಿಟಿ ಕೇಂದ್ರ ಸ್ಥಾಪನೆಗೆ ಬೇಕಾದ ಪೂರಕ ಕ್ರಮಗಳನ್ನು ಕೈಗೊಂಡು ಸರ್ವತೋಮುಖ ಬೆಳವಣಿಗೆಗೆ ನಾಂದಿ ಹಾಡಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement