ಲಖಿಂಪುರ ಖೇರಿ ಪ್ರಕರಣ: ಉತ್ತರ ಪ್ರ.ದೇಶದ ನ್ಯಾಯಾಂಗ ಆಯೋಗದಲ್ಲಿ ವಿಶ್ವಾಸವಿಲ್ಲ ಎಂದ ಸುಪ್ರೀಂಕೋರ್ಟ್, ಬೇರೆ ರಾಜ್ಯದ ನ್ಯಾಯಮೂರ್ತಿಗಳ ಮೇಲ್ವಿಚಾರಣೆಗೆ ಒಲವು

ನವದೆಹಲಿ: ಲಖಿಂಪುರ್ ಖೇರಿ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ನ್ಯಾಯಾಂಗ ಆಯೋಗದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ.
ಘಟನೆಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ವಾಹನ ಹರಿದಿತ್ತು. ಘಟನೆ ಮತ್ತು ಆ ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದರು. ತನಿಖೆಯ ಮೇಲ್ವಿಚಾರಣೆಗಾಗಿ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗವನ್ನು ಉತ್ತರ ಪ್ರದೇಶ ಸರ್ಕಾರ ನೇಮಿಸಿತ್ತು.
ಇಂದು (ಸೋಮವಾರ) ಈ ಪ್ರಕರಣ ಆಲಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌. ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಬೇರೆ ರಾಜ್ಯದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ತನಿಖೆಯ ಮೇಲ್ವಿಚಾರಣೆ ನಡೆಸಬೇಕೆಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ತನಿಖೆಯ ನೇತೃತ್ವ ವಹಿಸಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರಾಕೇಶ್ ಕುಮಾರ್ ಜೈನ್ ಅಥವಾ ರಂಜಿತ್ ಸಿಂಗ್ ಅವರ ಹೆಸರನ್ನು ಅದು ಸೂಚಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಬೇಕು ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಕೋರಿ ಬಂದಿರುವ ಪತ್ರಗಳ ಆಧಾರದ ಮೇಲೆ ದಾಖಲಾಗಿರುವ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಂತೆ ಮತ್ತು ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ತಮ್ಮ ಪತ್ರದಲ್ಲಿ, ವಕೀಲರಾದ ಶಿವಕುಮಾರ ತ್ರಿಪಾಠಿ ಮತ್ತು ಸಿ ಎಸ್ ಪಾಂಡ ಕೋರಿದ್ದರು.
ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಕಲಸು ಮೇಲೋಗರವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ನಾವು ಈ ತನಿಖೆಯ ಮೇಲ್ವಿಚಾರಣೆಗೆ ಬೇರೆ ರಾಜ್ಯದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ನೇಮಕವಾಗಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಿದ್ದೇವೆ. ನಿಮ್ಮ ರಾಜ್ಯದ ನ್ಯಾಯಾಂಗ ಸಮಿತಿ ಅದನ್ನು ಮೇಲ್ವಿಚಾರಣೆ ಮಾಡುವ ಬಗ್ಗೆ ನಮಗೆ ವಿಶ್ವಾಸವಿಲ್ಲ. ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅಥವಾ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಂಜಿತ್ ಸಿಂಗ್ ಮೇಲ್ವಿಚಾರಣೆ ಮಾಡಬಹುದು ಎಂದು ಪೀಠ ಹೇಳಿತು.
ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸುವ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಈ ಕುರಿತಂತೆ ಸರ್ಕಾರದಿಂದ ಸೂಚನೆ ಪಡೆಯುವುದಾಗಿ ತಿಳಿಸಿದರು. ಹೀಗಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.
ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರು ನಿರ್ವಹಿಸುತ್ತಿರುವ ರೀತಿಗೆ ನ್ಯಾಯಾಲಯ ಈ ಹಿಂದೆ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅಕ್ಟೋಬರ್ 7 ರಂದು ನಡೆದ ವಿಚಾರಣೆ ವೇಳೆ , ಎಫ್‌ಐಆರ್‌ ದಾಖಲಿಸಲಾಗಿದೆಯೇ, ಆರೋಪಿಗಳನ್ನು ಬಂಧಿಸಲಾಗಿದೆಯೇ ಎಂಬ ಕುರಿತಂತೆ ಸ್ಥಿತಿಗತಿ ವರದಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೆ ಸಾಕ್ಷಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಅಕ್ಟೋಬರ್ 26ರಂದು ನಡೆದ ವಿಚಾರಣೆ ವೇಳೆ ಸೂಚಿಸಿತ್ತು.
ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು ಒಂದು- ರೈತರ ಸಾವಿನ ಬಗ್ಗೆ ಮತ್ತೊಂದು- ಹಿಂಸಾಚಾರದಲ್ಲಿ ಅಸುನೀಗಿದ ರಾಜಕೀಯ ಕಾರ್ಯಕರ್ತರ ಬಗ್ಗೆ ಹಾಗೂ ಮೂರನೆಯದು- ಪತ್ರಕರ್ತರೊಬ್ಬರ ಸಾವಿನ ಬಗ್ಗೆ ಎಂದು ಇಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದೇ ವೇಳೆ ನ್ಯಾಯಾಲಯ ಮೂರು ಎಫ್‌ಐಆರ್‌ಗಳಲ್ಲಿನ ತನಿಖೆಯು ಪರಸ್ಪರ ಸ್ವತಂತ್ರವಾಗಿರಬೇಕಿದ್ದು ಒಂದು ಘಟನೆಯ ಸಾಕ್ಷಿಗಳನ್ನು ಮತ್ತೊಂದು ಘಟನೆಯ ಆರೋಪಿಗಳ ರಕ್ಷಣೆಗೆ ಬಳಸಬಾರದು ಎಂದು ಸೂಚಿಸಿತು.
ಈಗ ಎರಡು ಎಫ್‌ಐಆರ್‌ಗಳಿವೆ ಎಂದು ಹೇಳಲಾಗುತ್ತಿದ್ದು, ಒಂದು ಎಫ್‌ಐಆರ್‌ನಲ್ಲಿ ಸಂಗ್ರಹಿಸಿದ ಸಾಕ್ಷ್ಯವನ್ನು ಮತ್ತೊಂದಕ್ಕೆ ಬಳಸಲಾಗುತ್ತಿದೆ. ಎಫ್‌ಐಆರ್ ಸಂಖ್ಯೆ 220ರಲ್ಲಿರುವ ಸಾಕ್ಷ್ಯಗಳನ್ನು ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ,” ಎಂದು ಪೀಠ ಹೇಳಿದೆ.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement