ವೈವಾಹಿಕ ಜೀವನಕ್ಕೆ ಕಾಲಿಟ್ಟ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಾನವ ಹಕ್ಕುಗಳ ಹೋರಾಟಾರ್ತಿ ಮಲಾಲಾ ಯೂಸುಫ್​

ನವದೆಹಲಿ: ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್​ ಝಾಯಿ (Malala Yousafzai) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮದುವೆಯ ವಿಚಾರ ಹಂಚಿಕೊಂಡಿದ್ದಾರೆ. ಬ್ರಿಟನ್​​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಾನು ಮತ್ತು ಅಸ್ಸರ್​ ಮದುವೆಯಾಗಿದ್ದೇವೆ ಎಂದು ಮಲಾಲಾ ತಮ್ಮ ಟ್ವಿಟರ್​​ ಖಾತೆಯಲ್ಲಿ ತಮ್ಮ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ.​

ತಮ್ಮ ನಿಖಾ ಸಮಾರಂಭದ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಅಸ್ಸರ್​ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಬರ್ಮಿಂಗ್​ಹ್ಯಾಂನಲ್ಲಿ ನಾವು ನಮ್ಮ ಕುಟುಂಬದವರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದೇವೆ. ನಮಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಜೀವನದಲ್ಲಿ ಇದೊಂದು ರೋಮಾಂಚನಕಾರಿ ಸಂದರ್ಭ ಎಂದು ಹೇಳಿದ್ದಾರೆ.
ಮಲಾಲಾ ಯೂಸುಫ್​ 1997ರಲ್ಲಿ ಪಾಕಿಸ್ತಾನದ ಮಿಂಗೋರಾ ಎಂಬಲ್ಲಿ ಜನಿಸಿದ್ದಾರೆ. ಚಿಕ್ಕವಯಸ್ಸಿನಿಂದಲೇ ಹೆಣ್ಣುಮಕ್ಕಳ ಶಿಕ್ಷಣ, ವಿದ್ಯಾಭ್ಯಾಸದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ೧೩ ವರ್ಷವಾಗಿದ್ದಾಗ ಒಮ್ಮೆ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದಾಗ ಅವರ ಮೇಲೆ ತಾಲಿಬಾನ್​ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಅಂದು ಗುಂಡೇಟಿನಿಂದ ಗಾಯಗೊಂಡಿದ್ದ ಮಲಾಲಾರನ್ನು ಬರ್ಮಿಂಗ್​ಹ್ಯಾಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಗುಣಮುಖರಾದ ಬಳಿಕ ಕೂಡ ಅವರು ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಹೋರಾಟವನ್ನೇ ಮುಂದುವರಿಸಿದ್ದಾರೆ. ಅದಾದ ಬಳಿಕ ಅವರು ಬ್ರಿಟನ್ನಿನಲ್ಲಿಯೇ ವಾಸಿಸುತ್ತಿದ್ದರು.

ತಮ್ಮ ತಂದೆಯ ಸಹಾಯದಿಂದ ಮಲಾಲಾ ಫಂಡ್​ ಸ್ಥಾಪಿಸಿದರು. ಪ್ರತಿ ಹುಡುಗಿಯೂ ತಾನು ಕನಸುಕಂಡ ಗುರಿಯನ್ನು ಮುಟ್ಟಬೇಕು ಎಂದು ಹೇಳುತ್ತಿದ್ದ ಅವರು, ಅಂಥ ಹುಡುಗಿಯರಿಗೆ ಹಣದ ಅಗತ್ಯವಿದ್ದರೆ ಈ ಚಾರಿಟಿ ಮೂಲಕ ಹಣ ಸಹಾಯ ಮಾಡಲು ಶುರು ಮಾಡಿದರು. ಅವರ ಎಲ್ಲ ಕಾರ್ಯವನ್ನೂ ಗಮನಿಸಿ 2014ರ ಡಿಸೆಂಬರ್​​ನಲ್ಲಿ ನೊಬೆಲ್​ ಶಾಂತಿ ಪುರಸ್ಕಾರ ನೀಡಲಾಯಿತು. ಹೀಗೆ ನೊಬೆಲ್​ ಶಾಂತಿ ಪುರಸ್ಕಾರ ಪಡೆದ ಜಗತ್ತಿನ ಅತ್ಯಂತ ಕಿರಿಯಳು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 2020ರಲ್ಲಿ ಆಕ್ಸ್​ಫರ್ಡ್​ ಯೂನಿವರ್ಸಿಟಿಯಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement