ಶಿಕ್ಷಣದಲ್ಲಿ ರಾಜಕೀಯ ಯಾಕೆ ಬೆರೆಸುತ್ತಿದ್ದೀರಿ? : ಸರ್ಕಾರಕ್ಕೆ ವಿರುದ್ಧ ಹೈಕೋರ್ಟ್‌ ಪ್ರಶ್ನೆ

posted in: ರಾಜ್ಯ | 0

ಬೆಂಗಳೂರು: ಶಿಕ್ಷಣದಲ್ಲಿ ರಾಜಕೀಯವನ್ನು ಯಾಕೆ ಬೆರೆಸುತ್ತಿದ್ದೀರಿ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಪದವಿ ಕೋರ್ಸ್​ಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು (ಗುರುವಾರ) ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.
ಅಕ್ಟೋಬರ್‌ 26ರಂದು ಪೀಠ ಈ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಇಂದಿನ ವಿಚಾರಣೆಯ ಆರಂಭದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಭಾಷೆಯನ್ನು ಕಲಿಯುವುದನ್ನು ಪ್ರೋತ್ಸಾಹಿಸಲು ಅವಕಾಶವಿದೆ ಎಂದು ರಾಜ್ಯ ಸರ್ಕಾರದ ವಕೀಲರು ವಾದ ಮಂಡನೆ ಮಾಡಿದರು.
ಈ ಉತ್ತರಕ್ಕೆ ಸಮಾಧಾನಗೊಳ್ಳದ ಪೀಠ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈ ಕಡ್ಡಾಯಕ್ಕೆ ಅವಕಾಶವಿದೆಯೇ? ಹೊರರಾಜ್ಯದ ವಿದ್ಯಾರ್ಥಿಗಳ‌ ಕನ್ನಡ ಕಲಿಕೆ ಕಡ್ಡಾಯಗೊಳಿಸಬಹುದೇ? ಉನ್ನತ ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿತು.
ಈ ನೀತಿಯಿಂದಾಗಿ ಎಷ್ಟು ವಿದ್ಯಾರ್ಥಿಗಳು ಹೊರಹೋಗಿದ್ದಾರೆ ಗೊತ್ತೇ? ಉನ್ನತ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಲು ಅವಕಾಶ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿತು.ಸರ್ಕಾರಿ ವಕೀಲರು ವಾದ ಮಂಡನೆಗೆ ಅವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ನ.15 ಕ್ಕೆ ಹೈಕೋರ್ಟ್‌ ಮುಂದೂಡಿತು.
ಅರ್ಜಿದಾರರ ವಾದ..
ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆಗಸ್ಟ್ 7ರಂದು ಆದೇಶ ಹೊರಡಿಸಿತ್ತು. ಈ ಆದೇಶ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸಂಸ್ಕೃತಿ ಭಾರತಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳು ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿವೆ.
ಹಲವು ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ಕನ್ನಡ ಕಲಿತಿರುವುದಿಲ್ಲ. ಆದರೆ ಪದವಿ ಸೇರಿದ ಕೂಡಲೇ ಕನ್ನಡ ಕಲಿಯಬೇಕೆಂದು ಕಡ್ಡಾಯಗೊಳಿಸುವುದು ಸರಿಯಲ್ಲ. ನಮ್ಮ ರಾಜ್ಯವಲ್ಲದೇ, ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರದ ಕ್ರಮದಿಂದ ಈ ಎಲ್ಲಾ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ ಆಯ್ಕೆ ಆಧರಿತ ಶಿಕ್ಷಣ ಕ್ಕೆ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಕನ್ನಡ ಕಲಿಕೆ ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಗಿಲ್ಲ. ಹೀಗಿರುವಾಗ ಸರ್ಕಾರದ ಆದೇಶ ಏಕಪಕ್ಷೀಯವಾಗಿದೆ. ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಹಾಗೂ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ. ಹೀಗಾಗಿ ಕನ್ನಡ ಕಲಿಕೆ ಕಡ್ಡಾಯ ಆದೇಶ ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಓದಿರಿ :-   ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಡಿ.ಎಸ್. ನಾಗಭೂಷಣ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ