ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ; ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

ಜಲಾಲಾಬಾದ್: ಅಫ್ಘಾನಿಸ್ತಾನದ ನಂಗರ್​ಹಾರ್​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿನ ಮಸೀದಿಯಲ್ಲಿ ಇಂದು ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಸ್ಥಳೀಯ ಮುಲ್ಲಾ ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಎಂದು ಆ ಪ್ರದೇಶದ ನಿವಾಸಿ ಅಟಲ್ ಶಿನ್ವಾರಿ ಹೇಳಿದ್ದಾರೆ. ಮಸೀದಿಯ ಒಳಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ.
ನವೆಂಬರ್ 2ರಂದು ಅಫ್ಘಾನಿಸ್ತಾನದ ಕಾಬೂಲ್​ನ ಅತಿದೊಡ್ಡ ಮಿಲಿಟರಿ ಆಸ್ಪತ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ 25ಕ್ಕೂ ಹೆಚ್ಚು ಜನರು ಮೃತಪಟ್ಟಿಪ್ಪಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅಫ್ಘಾನ್​ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಜನಾಂಗೀಯ ಅಲ್ಪಸಂಖ್ಯಾತ ಹಜಾರಾ ಸಮುದಾಯದಲ್ಲಿ ಜನಪ್ರಿಯವಾಗಿರುವ ಎರಡು ಮಸೀದಿಗಳ ಮೇಲೆ ಈ ವರ್ಷದ ಆರಂಭದಲ್ಲಿ ಐಎಸ್ ದಾಳಿಯಲ್ಲಿ 120 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement