1947ರ ಸ್ವಾತಂತ್ರ್ಯ ಭಿಕ್ಷೆ ಹೇಳಿಕೆ: ಕಂಗನಾ ರಣಾವತ್‌ಗೆ ನೀಡಲಾದ ಪದ್ಮಶ್ರೀ ಹಿಂಪಡೆಯಲು ಹೆಚ್ಚುತ್ತಿರುವ ಒತ್ತಾಯದ ಕೂಗು

ನವದೆಹಲಿ: 1947ರಲ್ಲಿ ಭಾರತದ ಸ್ವಾತಂತ್ರ್ಯವನ್ನು ಭಿಕ್ಷೆ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿರುವ ನಂತರ ನಟಿ ಕಂಗನಾ ರಣಾವತ್ ಅವರಿಗೆ ನೀಡಲಾದ ಪದ್ಮಶ್ರೀ ಪುರಸ್ಕಾರವನ್ನು ಸರ್ಕಾರ ವಾಪಸ್‌ ತೆಗೆದುಕೊಳ್ಳಬೇಕು ಎಂದು ವಿವಿಧ ಪಕ್ಷಗಳ ನಾಯಕರು ಒತ್ತಾಯಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ 2014 ರ ನಂತರವೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ಕಂಗನಾ ಈ ಹೇಳಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ “ಆಘಾತಕಾರಿ ಮತ್ತು ಅತಿರೇಕದ ಹೇಳೀಕೆ” ಎಂದು ಹೇಳಿದ್ದಾರೆ ಮತ್ತು ಕಂಗನಾಗೆ ನೀಡಲಾದ ಪದ್ಮ ಪ್ರಶಸ್ತಿಯನ್ನು ಹಿಂಪಡೆಯುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಒತ್ತಾಯಿಸಿದರು.
ಕಂಗನಾ ರಣಾವತ್ ಅವರ ಹೇಳಿಕೆಯು ಮಹಾತ್ಮ ಗಾಂಧಿ, ನೆಹರು ಮತ್ತು ಸರ್ದಾರ್ ಪಟೇಲ್ ನೇತೃತ್ವದ ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತದೆ. ಸರ್ದಾರ್ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಇತರ ಹಲವಾರು ಕ್ರಾಂತಿಕಾರಿಗಳ ತ್ಯಾಗವನ್ನು ಕಡಿಮೆ ಮಾಡಿದೆ” ಎಂದು ಆನಂದ್ ಶರ್ಮಾ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಅಂತಹ ವ್ಯಕ್ತಿಗಳು ರಾಷ್ಟ್ರ ವೀರರನ್ನು ಅವಮಾನಿಸದಂತೆ ಅಂತಹ ಪ್ರಶಸ್ತಿಗಳನ್ನು ನೀಡುವ ಮೊದಲು ಮನೋವೈದ್ಯಕೀಯ ಮೌಲ್ಯಮಾಪನ ನಡೆಯಬೇಕು, ನಂತರವೇ ಪ್ರಶಸ್ತಿ ನೀಡುವ ಬಗ್ಗೆ ನಿರ್ಧರಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಹಾರದಲ್ಲಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿರುವ ಹಿಂದೂಸ್ತಾನಿ ಅವಾಮ್ ಮೋರ್ಚಾ ಅಧ್ಯಕ್ಷ ಜಿತನ್ ರಾಮ್ ಮಾಂಝಿ, ಇನ್ನು ಮುಂದೆ ಎಲ್ಲಾ ಸುದ್ದಿ ವಾಹಿನಿಗಳು ಈ ನಟಿಯನ್ನು ಬಹಿಷ್ಕರಿಸಬೇಕೆಂದು ಹೇಳಿದ್ದಾರೆ.
ರಾಷ್ಟ್ರಪತಿಯನ್ನು ಟ್ಯಾಗ್ ಮಾಡಿದ ಮಾಂಝಿ, “ಕಂಗನಾ ರಣಾವತ್‌ಗೆ ನೀಡಲಾದ ಪದ್ಮಶ್ರೀಯನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲದಿದ್ದರೆ ಜಗತ್ತು ಗಾಂಧಿ, ನೆಹರು, ಪಟೇಲ್, ಬೋಸ್‌, ಭಗತ್ ಸಿಂಗ್, ಕಲಾಂ, ಮುಖರ್ಜಿ, ಸಾವರ್ಕರ ಮೊದಲಾದವರು ಸ್ವಾತಂತ್ರ್ಯಕ್ಕಾಗಿ ಬೇಡಿಕೊಂಡಿದ್ದರು ಎಂದು ಭಾವಿಸುತ್ತದೆ” ಎಂದು ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯವನ್ನು “ಭಿಕ್ಷೆ” ಎಂದು ಕರೆದಿದ್ದಕ್ಕಾಗಿ ಕಂಗನಾ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು ಎಂದು ಶಿವಸೇನೆ ನಾಯಕ ನೀಲಂ ಗೋರ್ಹೆ ಹೇಳಿದ್ದಾರೆ.
ಈ ಕಾಮೆಂಟ್‌ಗಳಿಗಾಗಿ ಅವರ ಮೇಲೆ ದೇಶದ್ರೋಹದ ಆರೋಪ ಹೊರಿಸಬೇಕು. ನೀಡಲಾದ ಪದ್ಮ ಪ್ರಶಸ್ತಿಯನ್ನು ಸಹ ಹಿಂಪಡೆಯಬೇಕು” ಎಂದು ಶಿವಸೇನೆ ನಾಯಕಿ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದಲ್ಲಿ ಶಿವಸೇನೆಯ ಮಿತ್ರಪಕ್ಷವಾದ ಎನ್‌ಸಿಪಿ ಕೂಡ ನಟಿಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ ಮತ್ತು ಅವರನ್ನು ಬಂಧಿಸುವಂತೆ ಒತ್ತಾಯಿಸಿದೆ.
ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರವು ಕಂಗನಾ ಅವರಿಂದ ಪದ್ಮಶ್ರೀ ವಾಪಸು ಪಡೆದು ಆಕೆಯನ್ನು ಬಂಧಿಸಬೇಕು. ಕಂಗನಾ ರಣಾವತ್ ಅಂತಹ ಹೇಳಿಕೆ ನೀಡುವ ಮೊದಲು ಮಲಾನಾ ಕ್ರೀಮ್ (ನಿರ್ದಿಷ್ಟವಾಗಿ ಹಿಮಾಚಲದಲ್ಲಿ ಬೆಳೆಯುವ ನಿರ್ದಿಷ್ಟ ಹಶಿಶ್) ಅನ್ನು ಭಾರೀ ಪ್ರಮಾಣದಲ್ಲಿ ಸೇವಿಸಿದಂತಿದೆ,” ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷವು ಮುಂಬೈ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದು, ರಣಾವತ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದೆ. ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪ್ರೀತಿ ಶರ್ಮಾ ಮೆನನ್ ನಟಿಯ ಹೇಳಿಕೆಯನ್ನು “ದೇಶದ್ರೋಹಿ ಮತ್ತು ಪ್ರಚೋದಕ” ಎಂದು ಕರೆದಿದ್ದಾರೆ
ಬಿಜೆಪಿಯಿಂದಲೂ ಟೀಕೆಗಳು ಬಂದಿದ್ದು, ಲೋಕಸಭೆ ಸಂಸದ ವರುಣ್ ಗಾಂಧಿ ಇದನ್ನು ನಾನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯಬೇಕೆ ಎಂದು ಕೇಳಿದ್ದಾರೆ.
ಕೆಲವೊಮ್ಮೆ ಮಹಾತ್ಮ ಗಾಂಧಿಯವರ ತ್ಯಾಗ ಮತ್ತು ತಪಸ್ಸಿಗೆ ಅವಮಾನ, ಕೆಲವೊಮ್ಮೆ ಅವರ (ಮಹಾತ್ಮ ಗಾಂಧಿ) ಹಂತಕನಿಗೆ ಗೌರವ, ಮತ್ತು ಈಗ ಶಹೀದ್ ಮಂಗಲ್ ಪಾಂಡೆಯಿಂದ ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿಯವರೆಗೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ. ನಾನು ಇದನ್ನು ಹುಚ್ಚುತನ ಅಥವಾ ದೇಶದ್ರೋಹ ಎಂದು ಕರೆಯಬೇಕೇ?” ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement