ಪಂಜಾಬ್ ಚುನಾವಣೆಯಲ್ಲಿ ನಟ ಸೋನು ಸೂದ್ ಸೋದರಿ ಸ್ಪರ್ಧೆ: ಆದ್ರೆ ಪಕ್ಷ ಯಾವುದೆಂದು ಸಸ್ಪೆನ್ಸ್

ಚಂಡೀಗಡ:: ಬಾಲಿವುಡ್ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಮೊಗಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಟ ಸೂದ್‌ ಈ ಕುರಿತು ಘೋಷಣೆ ಮಾಡಿದ್ದು, ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
“ಮಾಳವಿಕಾ ರೆಡಿ. ಜನರ ಸೇವೆಗೆ ಅವರ ಬದ್ಧತೆ ಅಪ್ರತಿಮವಾಗಿದೆ ಎಂದು ಸೂದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮಾಳವಿಕಾ ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನು ಸೂದ್‌ “ಪಕ್ಷ ಮುಖ್ಯವಲ್ಲ, ಅದರ ನೀತಿ ಮುಖ್ಯ, ನನ್ನ ಸಹೋದರಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಾರೆ” ಎಂದು ಹೇಳಿದರು. ಆದಾಗ್ಯೂ, “ಎಎಪಿ ಮತ್ತು ಕಾಂಗ್ರೆಸ್ ಎರಡೂ ಉತ್ತಮ ಪಕ್ಷಗಳು” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಭೇಟಿಯಾಗಿದ್ದ ಸೋನು ಸೂದ್, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರನ್ನೂ ಭೇಟಿಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ತಾನು ರಾಜಕೀಯಕ್ಕೆ ಸೇರುವ ಉದ್ದೇಶ ಇಲ್ಲ ಎಂದು ಹೇಳಿದ ಸೋನು ಸೂದ್, ತನ್ನ ಕುಟುಂಬದ ಆಸಕ್ತಿ ಶಿಕ್ಷಣ ಮತ್ತು ಆರೋಗ್ಯದಲ್ಲಿದೆ ಎಂದು ಹೇಳಿದ್ದಾರೆ. ತಾವು ಪಂಜಾಬ್‌ನ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತಾರೆ ಎಂದಷ್ಟೆ ಹೇಳಿದರು.
ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆಯಾದರೂ, ನಟನ ಸಹೋದರಿ ಮೊಗಾದಿಂದ ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ಹರಡಿವೆ.
ಏತನ್ಮಧ್ಯೆ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರ ಪರೋಪಕಾರಿ ಕೆಲಸಕ್ಕಾಗಿ ಹೆಚ್ಚು ಪ್ರಶಂಸೆ ಗಳಿಸಿದ ನಟ, ತಮ್ಮ ತವರು ಮೊಗಾಕ್ಕೆ ಹೋಗುವ ಮೊದಲು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದರು. ವರದಿಗಳನ್ನು ನಂಬುವುದಾದರೆ, ಇಬ್ಬರೂ ಚಂಡೀಗಢದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.
ಇದಕ್ಕೂ ಮೊದಲು, ಹಿಂದಿನ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರವು ಸೂದ್ ಅವರನ್ನು ರಾಜ್ಯದಲ್ಲಿ ಕೋವಿಡ್‌-19 ಲಸಿಕೆ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿತ್ತು.
ಅಲ್ಲದೆ, ಸೂದ್ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ (ಎಎಪಿ) ಜೊತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಲ್ಯಾಣ ಯೋಜನೆಯ ಬ್ರಾಂಡ್ ಅಂಬಾಸಿಡರ್ ಸಹ ಆಗಿದ್ದಾರೆ. ಆದರೆ, ಎಎಪಿ ಸೇರುವ ಯಾವುದೇ ಯೋಜನೆ ಇಲ್ಲ ಎಂದು ನಟ ಈ ಹಿಂದೆ ಸ್ಪಷ್ಟಪಡಿಸಿದ್ದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement