ಕುಟುಂಬಕ್ಕೆ ನಿಷ್ಠನಾಗಿದ್ದ ರಿಕ್ಷಾ ಎಳೆಯುವ ಬಡವನಿಗೆ ಕೋಟಿ ರೂಪಾಯಿ ಆಸ್ತಿ ದಾನ ಮಾಡಿದ ವಿಧವೆ…!

ಒಡಿಶಾದ ಹಿರಿಯ ಮಹಿಳೆಯೊಬ್ಬರು ತಮ್ಮ ಉದಾರತೆಯಿಂದ ಮುಂದಿನ ಹಲವು ತಲೆಮಾರುಗಳಿಗೆ ಮಾದರಿಯಾಗಿದ್ದಾರೆ. ಒಡಿಶಾದ ಕಟಕ್ ನಗರದ ಮಹಿಳೆ ತನ್ನ ಸಂಪೂರ್ಣ ಆಸ್ತಿಯನ್ನು ತನ್ನ ನಂಬಿಗಸ್ಥನಾದ ರಿಕ್ಷಾ ಚಾಲಕನಿಗೆ ನೀಡಿ ಅವನನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ಮೂಲಕ ರಿಕ್ಷಾ ಚಾಲಕನ ಜೀವನವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ..!
ಒಡಿಶಾದ ಕಟಕ್ ನಗರದಲ್ಲಿ ವಾಸವಾಗಿರುವ 63 ವರ್ಷದ ವಿಧವೆ ಮಿನಾತಿ ಪಟ್ನಾಯಕ್ ಕಳೆದ 25 ವರ್ಷಗಳಿಂದ ತನ್ನ ಕುಟುಂಬಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ರಿಕ್ಷಾ ಎಳೆಯುವ ವ್ಯಕ್ತಿಯ ಹೆಸರಿಗೆ ತಾನು ವಾಸಿಸುವ ಮನೆ ಸೇರಿದಂತೆ ಜಮೀನು, ಆಸ್ತಿಯನ್ನು ನೀಡುವುದಾಗಿ ಉಯಿಲು (Will) ಮಾಡಿದ್ದಾರೆ.
ಮಿನಾತಿ ಪಟ್ನಾಯಕ್ ಅವರು ತನ್ನ ಪತ್ನಿ ಮತ್ತು ಇಬ್ಬರು ಪುತ್ರರ ಕುಟುಂಬದ ಬುಧನಿಗೆ ತನ್ನ ಸಂಪೂರ್ಣ ಆಸ್ತಿಯನ್ನು ದಾನ ಮಾಡಿದ ಕಾರಣ, ಖಂಡಿತವಾಗಿಯೂ ದಯೆಯ ಶಕ್ತಿಯನ್ನು ನೋಡುವಂತೆ ಮಾಡುತ್ತದೆ.
ಕಟಕ್‌ನ ಸುತಾಹನ ಮಿನಾತಿ ಪಟ್ನಾಯಕ್ ಶುಕ್ರವಾರ ತನ್ನ ಮೂರು ಅಂತಸ್ತಿನ ಮನೆ ಮತ್ತು ತನಗೆ ಸೇರಿದ ಎಲ್ಲ ವಸ್ತುಗಳು ಹಾಗೂ ಒಂದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ನಗರದ ರಿಕ್ಷಾ ಎಳೆಯುವ 53 ವರ್ಷದ ಬುಧ ಸಮಲ್ ಎಂಬವರ ಕುಟುಂಬಕ್ಕೆ ವಿಲ್ ಮಾಡಿದ್ದಾರೆ.
ಕಳೆದ ವರ್ಷ ಅನಿರೀಕ್ಷಿತವಾಗಿ ನನ್ನ ಪತಿ ಮತ್ತು ಮಗಳನ್ನು ಕಳೆದುಕೊಂಡ ನಂತರ, ನಾನು ಒಬ್ಬಂಟಿಯಾಗಿದ್ದೇನೆ ಮತ್ತು ನನ್ನ ಸರದಿಗಾಗಿ ಕಾಯುತ್ತಿದ್ದೇನೆ. ನಾನು ನನ್ನ ಆಸ್ತಿಯನ್ನು ಬಡ ಕುಟುಂಬಕ್ಕೆ ದಾನ ಮಾಡಲು ಬಯಸುತ್ತೇನೆ. ಕೊಳೆಗೇರಿಯಲ್ಲಿ ವಾಸಿಸುತ್ತಿರುವ ಬುಧ ಮತ್ತು ಅವನ ಕುಟುಂಬಕ್ಕೆ ನನ್ನ ಎಲ್ಲ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದೇನೆ. ಕಳೆದ 25 ವರ್ಷಗಳಲ್ಲಿ ಬುಧ ನನಗೆ ಮತ್ತು ನನ್ನ ಕುಟುಂಬಕ್ಕಾಗಿ ತುಂಬಾ ನಿಷ್ಠೆಯಿಂದ ಕೆಲಸ ಮಾಡಿದ್ದಾನೆ. ನಾನು ಅವರಿಗೆ ಕೃತಜ್ಞಳಾಗಿದ್ದೇನೆ. ಆತ ಯಾವಾಗಲೂ ಅವನದೆ ಆದ ಒಂದು ಆಶ್ರಯ ಹೊಂದಬೇಕೆಂಬುದು ನನ್ನ ಇಚ್ಛೆಯಾಗಿದೆ”ಎಂದು ಮಿನಾತಿ ಹೇಳಿದ್ದಾರೆ.
ಮಿನಾತಿ ಕಳೆದ ವರ್ಷ ತನ್ನ 70 ವರ್ಷದ ಪತಿ, ಉದ್ಯಮಿ ಕೃಷ್ಣ ಕುಮಾರ್ ಪಟ್ನಾಯಕ್ ಅವರನ್ನು ಕಳೆದುಕೊಂಡಿದ್ದರು. ಅದಾದ ಆರು ತಿಂಗಳ ನಂತರ, ತನ್ನ 31 ವರ್ಷದ ಮಗಳು ಕೋಮಲ್ ಕುಮಾರಿ ಅವರನ್ನು ಕಳೆದುಕೊಂಡಿದ್ದರು. ಮಗಳು ಎಣ್ಣೆ ದೀಪವನ್ನು ಬೆಳಗಿಸುವಾಗ ಗಾಯಗೊಂಡು ಮತ್ತು ಆ ಕ್ಷಣದಲ್ಲೇ ಹೃದಯ ಸ್ತಂಭನವಾಗಿ ಮೃತಪಟ್ಟಿದ್ದರು. ಆರು ತಿಂಗಳ ಅಂತರದಲ್ಲಿ ಎರಡು ಸಾವಿನಿಂದ ಕಂಗಾಲಾದ ಮಿನಾತಿ ಬದುಕಿನ ಭರವಸೆ ಕಳೆದುಕೊಂಡಿದ್ದರು. ಅವರು ಊಟ-ಉಪಾಹಾರ ತ್ಯಜಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಬುಧ ಆಸ್ಪತ್ರೆಗೆ ಸೇರಿಸಿ, ಅವರ ಆರೈಕೆ ಮಾಡಿದ್ದರು. ನಂತರದ ದಿನಗಳಲ್ಲೂ ಅವರ ಅಗತ್ಯಗಳನ್ನು ನೋಡಿಕೊಳ್ಳುವುದರಿಂದ, ಬುಧ ಮತ್ತು ಆತನ ಕುಟುಂಬ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸೇವೆ ಮಾಡಿದೆ.
ಕಳೆದ 25 ವರ್ಷಗಳಿಂದ ತನ್ನ ಕುಟುಂಬವು ಬಂಡಿ ಎಳೆಯುವ ಬುಧನೊಂದಿಗೆ ಸುರಕ್ಷಿತವಾಗಿದೆ ಎಂದು ಮಿನಾತಿ ಹೇಳಿದ್ದಾರೆ. “ನನ್ನ ಮಗಳು ಶಾಲೆಯಲ್ಲಿದ್ದಾಗ, ಬುಧ ಅವಳನ್ನು ಕರೆದುಕೊಂಡು ಹೋಗಿ ಮರಳಿ ಕರೆತರುತ್ತಿದ್ದ. ನನ್ನ ಪತಿ ಯಾವಾಗಲೂ ಅವನನ್ನು ನಂಬುತ್ತಿದ್ದರು. ನನ್ನ ಮಗಳ ಮರಣದ ನಂತರ, ನನ್ನ ಸಂಬಂಧಿಕರು ಅಥವಾ ನನ್ನ ಪೋಷಕರ ಕುಟುಂಬದ ಯಾರೊಬ್ಬರೂ ನನ್ನ ಆರೋಗ್ಯದ ಬಗ್ಗೆ ವಿಚಾರಿಸಲು ಅಥವಾ ನನ್ನ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಕಳೆದ 25 ವರ್ಷಗಳಿಂದ ಬುಧ ಮತ್ತು ಅವರ ಕುಟುಂಬವೇ ನನ್ನನ್ನು ನೋಡಿಕೊಂಡಿದೆ. ಅವರು ಯಾವಾಗಲೂ ನನಗೆ ಗೌರವವನ್ನು ನೀಡುತ್ತಾರೆ ಮತ್ತು ನನ್ನ ಕುಟುಂಬದಂತೆ ಚೆನ್ನಾಗಿ ನೋಡಿಕೊಳ್ಳುತ್ತ ಬಂದಿದ್ದಾರೆ ಎಂದು ಅವರು ತಾನು ಅಷ್ಟೊಂದು ಆಸ್ತಿಯನ್ನು ಬುಧ ಮತ್ತು ಆತನ ಕುಟುಂಬಕ್ಕೆ ನೀಡುತ್ತಿರುವುದಕ್ಕೆ ಕಾರಣ ಎಂದು ಹೇಳಿದ್ದಾರೆ.
ಅಲ್ಲದೆ, ಈಗ, ನನ್ನ ಸಾವಿನ ನಂತರ ಬುಧ ಮತ್ತು ಅವನ ಕುಟುಂಬಕ್ಕೆ ಯಾರೂ ಕಿರುಕುಳ ನೀಡುವುದಿಲ್ಲ, ”ಎಂದು ಅವರು ಹೇಳಿದ್ದಾರೆ.
ರಿಕ್ಷಾ ಚಾಲನ ಬುಧನಿಗೆ ಮಿನಾತಿ ಅವರು ತನ್ನ ಆಸ್ತಿ ನೀಡಿರುವ ಬಗ್ಗೆ ಹೇಳಿದಾಗ ಅವರು, “ನಾನು ಆಸ್ತಿಯ ಕನಸು ಕಂಡಿರಲಿಲ್ಲ. ಆದರೆ ಮಿನಾತಿ ಅವರ ಪತಿ ತೀರಿಕೊಂಡ ನಂತರ ನನ್ನ ಕುಟುಂಬ ಯಾವಾಗಲೂ ಅವರನ್ನು ಆತ್ಮೀಯವಾಗಿ ನೋಡಿಕೊಂಡೆವು. ಅವರು ಜೀವಂತವಾಗಿರುವವರೆಗೂ ನಾವು ಅವರನ್ನು ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ”ಎಂದು ಬುಧ ಸಮಲ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement