ಬಿಟ್‌ ಕಾಯಿನ್ ಹಗರಣದ ಹಿಂದೆ ಯಾರ‍್ಯಾರಿದ್ದಾರೋ ಅವರನ್ನೆಲ್ಲ ಬಲಿ ಹಾಕ್ತೇವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಹಿಂದೆ ಯಾರ್ಯಾರು ಇದ್ದಾರೆಯೋ ಅವರ್ಯಾರನ್ನೂಬಿಡುವುದಿಲ್ಲ. ಖಂಡಿತವಾಗಿ ಅವರನ್ನು ಬಲಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‍ನವರು ಹೇಳುತ್ತಿದ್ದಾರೆ. 2016ರಿಂದ ಕರ್ನಾಟಕದಲ್ಲಿ ಬಿಟ್ ಕಾಯಿನ್ ಹಗರಣ ಇದ್ದಿದ್ದಾದರೆ ರಾಜ್ಯದಲ್ಲೇ ಅವರದ್ದೇ ಸರ್ಕಾರ ಅಧಿಕಾರದಲ್ಲಿತ್ತು. ಆಗ್ಯಾಕೆ ತನಿಖೆ ಮಾಡಲಿಲ್ಲ. ರಂದೀಪ್ ಸುರ್ಜೇವಾಲ ಅವರು ಆಗ ಅಧಿಕಾರದಲ್ಲಿದ್ದ ಸಚಿವರು ಹಾಗೂ ಮುಖ್ಯಮಂತ್ರಿ ಆಗಿದ್ದವರನ್ನೇ ಈ ಬಗ್ಗೆ ಪ್ರಶ್ನಿಸಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ.
2016ರಲ್ಲಿ ಶ್ರೀಕಿಯನ್ನು ಅಲಿಯಾಸ್‌ ಶ್ರೀಕೃಷ್ಣನನ್ನು ಬಂಧಿಸಿದ ನಂತರ ಬಿಡುಗಡೆ ಮಾಡಿದ್ದಾರೆ. ಅಂದೇ ವಿಚಾರಣೆ ಮಾಡಿದ್ದರೆ ಎಲ್ಲವೂ ಬಹಿರಂಗವಾಗುತ್ತಿತ್ತು. ಆತ ಜಾಮೀನು ತೆಗೆದುಕೊಂಡ ನಂತರ ಕೂಡ ವಿಚಾರಣೆ ಮಾಡಬಹುದಾಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ವಿಚಾರಣೆ ಮಾಡಲಿಲ್ಲ. 2020ರಲ್ಲಿ ನಮ್ಮ ಸರ್ಕಾರ ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಬಂಧಿಸಿತು. ಈ ವೇಳೆ ಹ್ಯಾಕಿಂಗ್ ಕುರಿತ ವಿಚಾರ ಬಹಿರಂಗವಾಯಿತು. 2018ರಲ್ಲಿ ನೀವು ಅಧಿಕಾರದಲ್ಲಿದ್ದಾಗ ವಿಚಾರಣೆ ಮಾಡಲಿಲ್ಲ. ಈಗ ನಮಗೆ ಪ್ರಶ್ನೆ ಮಾಡುತ್ತೀರಾ? ಶ್ರೀಕಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಬಿಟ್ಟಿದ್ದು ಕಾಂಗ್ರೆಸ್. ನಾವು ತನಿಖೆ ಮಾಡದೆ ಬಿಟ್ಟವರಿಂದ ಕಲಿಯಬೇಕಿಲ್ಲ ಎಂದು ಸುರ್ಜೇವಾಲಾ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಒಂದು ಟ್ವಿಟ್ಟರ್ ಹ್ಯಾಂಡಲ್ ಮೇಲೆ ನೀವು ವಿಚಾರಗಳನ್ನು ಪ್ರಸ್ತಾಪ ಮಾಡುತ್ತೀರಿ ಎಂದಾದರೆ ನಿಮ್ಮ ಚಿಂತನೆಯ ದಿವಾಳಿ ಎಷ್ಟಾಗಿದೆ ಎಂಬುದು ಗೊತ್ತಾಗುತ್ತದೆ. ಟ್ವಿಟ್ಟರಿಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಒಂದು ವೇಳೆ ಟ್ವಿಟ್ಟರ್ ವಿಚಾರ ಪ್ರಸ್ತಾಪಿಸುವುದೇ ಆದರೆ ಸಾಕ್ಷಿ ಪುರಾವೆ ಸಮೇತ ಮಾತನಾಡಬೇಕಾಗಿತ್ತು. ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ಲಕ್ಷಗಟ್ಟಲೇ, ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುವುದು. ಒಬ್ಬ ರಾಷ್ಟ್ರೀಯ ಪಕ್ಷದ ನಾಯಕನಿಗೆ ಶೋಭೆ ತರುವಂಥದ್ದಲ್ಲ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಬಿಟ್ ಕಾಯಿನ್ ಹಗರಣವನ್ನು ಬಯಲು ಮಾಡಿದ್ದೆ ನಾವು. ಈ ಕುರಿತು ಇಡಿ ಮತ್ತು ಸಿಬಿಐಗೆ ತನಿಖೆಗೆ ಕೊಟ್ಟಿದ್ದೇ ನಾವು. ಇಂದು ಈ ಕುರಿತು ತನಿಖೆ ನಡೆಯುತ್ತಿದೆ. ಅವರು ಹಲವಾರು ಮಾಹಿತಿಗಳನ್ನು ಕೇಳಿದ್ದಾರೆ ಅದನ್ನು ಸಹ ಕೊಟ್ಟಿದ್ದೇವೆ. ಇದರ ಹಿಂದೆ ಯಾರ್ಯಾರು ಇದ್ದಾರೆಯೋ ಅವರ್ಯಾರನ್ನೂ ಬಿಡುವುದಿಲ್ಲ. ಖಂಡಿತವಾಗಿಯೂ ಬಲಿ ಹಾಕುತ್ತೇವೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲದೆ ಇರುವವರ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದೀರಿ ಎಂದು ಹೇಳಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿಟ್ ಕಾಯಿನ್ ಹಗರಣದ ಹಿಂದೆ ಇಬ್ಬರು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎಂದು ಹೇಳುತ್ತಿದೀರಿ. ಆ ಇಬ್ಬರು ಪ್ರಭಾವಿಗಳ ಹೆಸರು ಹೇಳಿ, ಆ ಬಗ್ಗೆ ದಾಖಲೆ ನಿಡುಗಡೆ ಮಾಡಿ, ನಮಗಾದರೂ ಕೊಡಲಿ ಅಥವಾ ಜಾರಿ ನಿರ್ದೇಶನಾಲಯಲಕ್ಕಾದರೂ ಕೊಡಲಿ ಎಂದು ಕಾಂಗ್ರೆಸ್‍ ನಾಯಕರಿಗೆ ಸವಾಲು ಹಾಕಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement