ಅತ್ಯಾಧುನಿಕ ಸೌಲಭ್ಯದ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಭೋಪಾಲ್: ಮಧ್ಯಪ್ರದೇಶದಲ್ಲಿಯೇ ಅತ್ಯಂತ ಅಧುನಿಕ ಎಂಬ ಪರಿಗಣಿಸಲ್ಪಟ್ಟ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಗರದಲ್ಲಿ ಉದ್ಘಾಟಿಸಿದರು.
ಈ ಮೊದಲು ಈ ನಿಲ್ದಾಣವನ್ನು ಹಬೀಬ್​ಗಂಜ್ ನಿಲ್ದಾಣ ಎಂದು ಕರೆಯುತ್ತಿದ್ದರು. ಗೋಂಡಾ ಬುಡಕಟ್ಟಿಗೆ ಸೇರಿದ ರಾಣಿ ಕಮಲಾಪತಿ ಅವರ ಸ್ಮರಣಾರ್ಥ ನಿಲ್ದಾಣದ ಹೆಸರು ಬದಲಿಸಲಾಗಿದೆ. ರಾಜ್ಯಪಾಲರಾದ ಮನ್​ಗುಭಾಯ್ ಪಟೇಲ್, ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಿನ್ನೋರ್​​ಗಡದ ರಾಣಿ ಕಮಲಾಪತಿ ಅವರ ಹೆಸರು ಇರಿಸಿದ ನಂತರ ನಿಲ್ದಾಣದ ಪ್ರಾಮುಖ್ಯತೆ ಹೆಚ್ಚಾಗಿದೆ. ಐತಿಹಾಸಿಕ ಮಹತ್ವದ ರೈಲು ನಿಲ್ದಾಣದ ಹೆಸರಿನ ಮೂಲಕ ಗೋಂಡವನದ ಹೆಮ್ಮೆಯ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಳ್ಳಲು ಭಾರತೀಯ ರೈಲ್ವೆ ಹೆಮ್ಮೆಪಡುತ್ತದೆ. ಮರುನಿರ್ಮಾಣಗೊಂಡಿರುವ ಈ ಐತಿಹಾಸಿಕ ರೈಲು ನಿಲ್ದಾಣವು ಭಾರತೀಯ ರೈಲ್ವೆಯ ಭವಿಷ್ಯದ ದ್ಯೋತಕ ಎಂದು ಹೇಳಿದರು.
ಈ ಮೊದಲು ಕೇವಲ ವಿಮಾನ ನಿಲ್ದಾಣಗಳಲ್ಲಿ ದೊರೆಯುತ್ತಿದ್ದ ಸೌಲಭ್ಯಗಳು ಇದೀಗ ರೈಲು ನಿಲ್ದಾಣಗಳಲ್ಲಿ ಸಿಗುತ್ತಿವೆ. ಅತ್ಯುತ್ತಮ ವಾತಾನುಕೂಲ ಮತ್ತು ಹವಾನಿಯಂತ್ರಕ ವ್ಯವಸ್ಥೆ ಹೊಂದಿದೆ. ದೇಶವು ಹೇಗೆ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂಬುದಕ್ಕೆ ಭಾರತೀಯ ರೈಲ್ವೆಯು ಉತ್ತಮ ಉದಾಹರಣೆ ಎಂದರು.

ಹಬೀಬ್​ಗಂಜ್ ರೈಲು ನಿಲ್ದಾಣದ ಹೆಸರು ಬದಲಿಸುವಂತೆ ಮಧ್ಯಪ್ರದೇಶ ಸರ್ಕಾರವು ಕೇಂದ್ರ ಗೃಹ ಇಲಾಖೆಗೆ ಪತ್ರಬರೆದು ವಿನಂತಿಸಿತ್ತು. ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡ ಅವರ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸುವ ಬುಡಕಟ್ಟು ಜನರ ಸಮಾವೇಶ ‘ಜನಜಾತಿಯ ಗೌರವ ದಿನಸ’ದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಭೋಪಾಲ್​ಗೆ ಬಂದಿದ್ದರು. ಇದೇ ಸಂದರ್ಭ ನವೀಕೃತ ರೈಲು ನಿಲ್ದಾಣಕ್ಕೂ ಚಾಲನೆ ನೀಡಿದರು.
ರೈಲು ನಿಲ್ದಾಣವನ್ನು ₹ 450 ಕೋಟಿ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಪರಿಸರ ಸ್ನೇಹಿ ಕಟ್ಟಡದಲ್ಲಿ ವಿಶ್ವದರ್ಜೆಯ ಸೌಲಭ್ಯಗಳು ಲಭ್ಯವಿದೆ. ಅಂಗವಿಕಲರಿಗೆ ಬೇಕಿರುವ ಅನುಕೂಲಗಳನ್ನೂ ಕಲ್ಪಿಸಲಾಗಿದೆ. ಬಹುಹಂತದ ಸಾರಿಗೆ ವ್ಯವಸ್ಥೆಯನ್ನೂ ಈ ನಿಲ್ದಾಣದಲ್ಲಿ ಕಲ್ಪಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ