ಕನ್ನಡ ಕಡ್ಡಾಯ ಬಹುದಿನಗಳ ಬೇಡಿಕೆ: ಸರ್ಕಾರದ ಸಮರ್ಥನೆ

ಬೆಂಗಳೂರು; ಪದವಿ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿ ಅಫಿಡವಿಟ್‌ ಸಲ್ಲಿಸಬೇಕು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್‌ ಆದೇಶ ಮಾಡಿದೆ.
ಎರಡು ತಾಸಿಗೂ ಹೆಚ್ಚು ಕಾಲ ಅರ್ಜಿದಾರರು ಮತ್ತು ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 30ಕ್ಕೆ ಮುಂದೂಡಿದೆ.
ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್‌ ಪ್ರಭುಲಿಂಗ ನಾವದಗಿ “ಸಂಸ್ಕೃತ ಭಾಷೆ ಮತ್ತು ಪ್ರಾಧ್ಯಾಪಕರ ಹಿತಾಸಕ್ತಿ ಕಾಯಲು ಸಂಸ್ಕೃತ ಭಾರತಿ ರಚನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಇದನ್ನು ನಾವು ಪ್ರಶ್ನಿಸುವುದಿಲ್ಲ. ರಾಜ್ಯ ಸರ್ಕಾರದ ಆದೇಶದಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕಾಲೇಜುಗಳಿಗೆ ಸಮಸ್ಯೆಯಾಗುತ್ತದೆ ಎಂದು ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಆದೇಶದಿಂದ ಯಾರಿಗಾದರೂ ಸಮಸ್ಯೆಯಾದರೆ ಮನವಿಯಲ್ಲಿ ಹೇಳಿರುವಂತೆ ಅವರು ತಮ್ಮ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಲಯದ ಮೆಟ್ಟಿಲೇರಬಹುದು. ಆದರೆ, ಇಂದಿನವರೆಗೆ ಯಾವುದೇ ವಿದ್ಯಾರ್ಥಿ ಅಥವಾ ಸಂಸ್ಥೆ ನ್ಯಾಯಾಲಯದ ಮುಂದೆ ಬಂದಿಲ್ಲ. ಮೂರನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗಾಗಿ ಮನವಿ ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ವಾದಿಸಿದರು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಕನ್ನಡವನ್ನು ಕಡ್ಡಾಯ ಮಾಡಿದರೆ ವಿದ್ಯಾರ್ಥಿಗಳಿಗೆಲ್ಲಾ ಕನ್ನಡದ ಕಡೆ ವಾಲಿದರೆ ಸಂಸ್ಕೃತ ಬೋಧಿಸುವ ಪ್ರಾಧ್ಯಾಪಕರ ಬದುಕಿಗೆ ಧಕ್ಕೆಯಾಗುತ್ತದೆ ಎಂಬುದು ಅರ್ಜಿದಾರರ ಆತಂಕವಿರಬಹುದು. ಅಲ್ಪಸಂಖ್ಯಾತ ಭಾಷೆಗಳನ್ನು ಬೋಧಿಸುವ ಶೇ.90ರಷ್ಟು ಪ್ರಾಧ್ಯಾಪಕರು ಖಾಸಗಿ ಕಾಲೇಜುಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಶೇ. 10ರಷ್ಟು ಮಂದಿ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಕನ್ನಡವನ್ನು ಕಡ್ಡಾಯ ಮಾಡುವುದರಿಂದ ಈ ಅಲ್ಪಸಂಖ್ಯಾತ ಭಾಷೆ ಬೋಧಿಸುವ ಪ್ರಾಧ್ಯಾಪಕರು ಜೀವನಾಧಾರ ಕಳೆದುಕೊಳ್ಳಲಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ. ಹೀಗಾಗಿ, ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವ ಉದ್ದೇಶ ಇಲ್ಲಿರುವುದರಿಂದ ಅರ್ಜಿದಾರರು ಖಾಸಗಿ ಅರ್ಜಿ ಸಲ್ಲಿಸಬೇಕಿತ್ತು. ಈ ಹಿನ್ನೆಲೆಯಲ್ಲಿ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದು ತಮ್ಮ ವಾದ ಮಂಡಿಸಿದರು.
ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ವಿಷಯವನ್ನಾಗಿ ಬೋಧಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದ್ದು, ಇದನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿದೆ. ಸಾಹಿತಿ ಹಾಗೂ ಹೋರಾಟಗಾರ ವಿ ಕೃ ಗೋಕಾಕ್‌ ನೇತೃತ್ವದ ಸಮಿತಿಯು ನೀಡಿರುವ ವರದಿಯ ಶಿಫಾರಸ್ಸುಗಳನ್ನು 1982ರಲ್ಲಿ ಅಂದಿನ ಸಚಿವ ಸಂಪುಟ ಒಪ್ಪಿಕೊಂಡಿದೆ” ಎಂದು ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ನೀತಿಯನ್ನು ಬಲವಾಗಿ ಸಮರ್ಥಿಸಿದರು.
ತಮ್ಮ ವಾದದ್ದಕ್ಕೂ ಮಹಾರಾಷ್ಟ್ರ, ಪಂಜಾಬ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗೆ ನೀಡಿರುವ ಮಹತ್ವ, ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು. ಅಲ್ಲದೇ, ಪದವಿ ಹಂತದಲ್ಲಿ ಶಾಸ್ತ್ರೀಯವಾಗಿ ಕನ್ನಡ ಕಲಿಸುವುದಿಲ್ಲ. ರಾಜ್ಯದಲ್ಲಿ ಸಂವಹನಕ್ಕೆ ಅಗತ್ಯವಾದ ರೀತಿಯಲ್ಲಿ ಕನ್ನಡ ಬೋಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಪದವಿ ವಿದ್ಯಾರ್ಥಿಗಳಿಗೆ ಅ, ಆ, ಇ, ಈ ಹೇಳಿಕೊಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಜನರು ಭಾಷೆಯ ಸೆಳೆತಕ್ಕೆ ಒಳಗಾಗಬೇಕೆ ವಿನಾ ಅದನ್ನು ಕಡ್ಡಾಯ ಮಾಡಬಾರದು. ಮಾಜಿ ಪ್ರಧಾನಿ ಪಿ ವಿ ನರಸಿಂಹರಾವ್‌ ಅವರಿಗೆ 12 ಭಾಷೆಗಳು ತಿಳಿದಿತ್ತು. ವೈಯಕ್ತಿಕವಾಗಿ ನನಗೆ ಒಂಭತ್ತು ಭಾಷೆಗಳು ಗೊತ್ತಿದೆ. ಭಾಷೆ ಕಲಿಯಬೇಕು ಎಂಬುದು ಪ್ರತಿಯೊಬ್ಬರ ಆಯ್ಕೆಯಾಗಬೇಕೆ ವಿನಾ ಅದನ್ನು ಕಡ್ಡಾಯ ಮಾಡಬಾರದು. ಕಡ್ಡಾಯ ಮಾಡುವುದನ್ನು ಸಮರ್ಥನೆ ಮಾಡಲಾಗದು” ಎಂದರು.

advertisement
ಓದಿರಿ :-   ಅನಾರೋಗ್ಯದಲ್ಲೂ ಧನಾತ್ಮಕ ಚಿಂತನೆ ಜೀವನ ಮಂತ್ರ ಮಾಡಿಕೊಂಡಿದ್ದ ರಾಕೇಶ್ ಜುಂಜುನ್ವಾಲಾ, ಕಜ್ರಾ ರೇ' ಹಾಡಿಗೆ ಗಾಲಿ ಖುರ್ಚಿಯಲ್ಲೇ ಡಾನ್ಸ್‌ | ವೀಕ್ಷಿಸಿ

“ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುತೇಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ರಾಜ್ಯ ಸರ್ಕಾರದ ನೀತಿಯಿಂದಾಗಿ ಸಂಸ್ಕೃತ ಸೇರಿದಂತೆ ಇತರೆ ಭಾಷೆಯ ವಿದ್ಯಾರ್ಥಿಗಳು ಅದನ್ನು ಕಲಿಯಲಾಗುತ್ತಿಲ್ಲ. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ನಿಲುವಿನಿಂದ ತುಂಬಾ ಸಮಸ್ಯೆಯಾಗಿದೆ ಎಂದು ವಾದಿಸಿದರು.
ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ಸರ್ಕಾರದ ಆದೇಶಕ್ಕೆ ಸದ್ಯಕ್ಕೆ ತಡೆ ನೀಡಬೇಕು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ವಿಷಯಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡಬೇಕು. ಒಂದೊಮ್ಮೆ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯವು ಎತ್ತಿ ಹಿಡಿದರೆ ಮುಂದಿನ ಸೆಮಿಸ್ಟರ್‌ಗಳಿಂದ ವಿದ್ಯಾರ್ಥಿಗಳು ಕನ್ನಡ ಕಲಿಯಬಹುದಾಗಿದೆ” ಎಂದು ಪೀಠಕ್ಕೆ ಮನವಿ ಮಾಡಿದರು.
2014ರಲ್ಲಿ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರ ವರ್ಸಸ್‌ ವಿವಿಧ ಸಂಸ್ಥೆಗಳ ಪ್ರಕರಣದಲ್ಲಿ ಭಾಷೆಯನ್ನು ಕಡ್ಡಾಯಗೊಳಿಸಲಾಗದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಸದ್ಯದ ರಾಜ್ಯ ಸರ್ಕಾರದ ಆದೇಶದಲ್ಲಿ ಸಡಿಲಿಕೆ ಮಾಡಬೇಕು” ಎಂದು ಕೋರಿದರು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement