ಭಾರತ ಜಾಗತಿಕವಾಗಿ ಆಹಾರ ಧಾನ್ಯಗಳ ಪೂರೈಕೆ ಹಬ್ ಆಗಿ ಪರಿವರ್ತನೆ: ಸಚಿವ ಪಿಯೂಷ್ ಗೋಯಲ್‌

ಹುಬ್ಬಳ್ಳಿ: ವಿಶ್ವದಲ್ಲಿ ಭಾರತ ಕೃಷಿ ಉತ್ಪನ್ನಗಳ ರಫ್ತುವಿನಲ್ಲಿ 5ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಆಹಾರ ಧಾನ್ಯಗಳ ಪೂರೈಕೆ ಹಬ್ ಆಗಿ ಪರಿವರ್ತನೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸರಬರಾಜು ಸಚಿವರಾದ ಪಿಯುಷ್ ಗೋಯಲ್ ಹೇಳಿದರು.
ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿನ ಭಾರತೀಯ ಆಹಾರ ನಿಗಮದ ಉಗ್ರಾಣಗಳ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಿಭಾಗೀಯ ಕಚೇರಿಯ ನೂತನ ಕಟ್ಟಡ, ತಮಿಳುನಾಡಿನ ತಂಜಾವೂರಿನಲ್ಲಿನ ಆಹಾರ ವಸ್ತು ಸಂಗ್ರಹಾಲಯವನ್ನು ವರ್ಚಯಲ್ ಆಗಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 15 ತಿಂಗಳು‌, ದೇಶದ 80 ಕೋಟಿ ಜನರಿಗೆ 5 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲಾಗಿದೆ. ಆಹಾರ ಭದ್ರತೆ ಕಾಯ್ದೆಯನ್ನು ದೇಶದಲ್ಲಿ ಅನುಷ್ಠಾನ ಮಾಡಲಾಗಿದೆ. ಯಾವೊಬ್ಬ ವ್ಯಕ್ತಿಯ ಕೂಡ ಹಸಿವಿನಿಂದ ಬಳಲ ಬಾರದು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರ್ಕಾರ ಯೋಜನೆ ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು. ಕಳೆದ ಸರ್ಕಾರದ ಅವಧಿಗೆ ಹೊಲಿಸಿದರೆ ಆಹಾರ ಧಾನ್ಯ ಖರೀದಿ ಹಾಗೂ ಸಂಗ್ರಹಣೆಯಲ್ಲಿ ಎರಡುಪಟ್ಟು ಹೆಚ್ಚಳವಾಗಿದೆ. ರೈತರ ಆದಾಯ ದುಪ್ಪಟ್ಟು ಮಾಡುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಆದಿವಾಸಿಗಳು ಹಾಗೂ ಬುಡಕಟ್ಟು ಜನರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. 75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ಇವರನ್ನು ಸ್ಮರಿಸುವುದು ಅಗತ್ಯವಾಗಿದೆ. ನವೆಂಬರ್ 15 ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಜಾ ಮುಂಡಾ ಜನ್ಮದಿನವಾಗಿದೆ. ಈ ದಿನವನ್ನು ಭಾರತ ಸರ್ಕಾರ “ಜನ ಜಾತಿಯ ಗೌರವ್ ದಿವಸ್” ಘೋಷಿಸಿದೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಏಳು ವರ್ಷಗಳಲ್ಲಿ ಎಸ್.ಸಿ‌ ಹಾಗೂ ಎಸ್.ಟಿ ಮೀಸಲಾತಿ ಹೆಚ್ಚಿಸಲಾಗಿದೆ. ಬುಡಕಟ್ಟು ಜನರಿಗಾಗಿ ಮೀಸಲಿರಿಸುತ್ತಿದ್ದ ಅನುದಾನವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ. 21 ಸಾವಿರ ಕೋಟಿ ಅನುದಾನವನ್ನು 78 ಸಾವಿರ ಕೋಟಿ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ನೂತನವಾಗಿ 92 ಏಕಲವ್ಯ ಶಾಲೆಗಳ ಸ್ಥಾಪನೆ ಮಾಡಿದೆ. ವಿದ್ಯಾರ್ಥಿ ವೇತನವನ್ನು ಹೆಚ್ಚಿಸಲಾಗಿದೆ. ಆಹಾರ ನಿಮಗದಿಂದ ಅರಣ್ಯ ಉತ್ಪನಗಳ ಖರೀದಿ ಸಹ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ 10 ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಮುಂದಾಗಿದೆ. ನವೆಂಬರ್ 15, ಜಾರ್ಖಂಡ್ ರಾಜ್ಯದ ಸ್ಥಾಪನೆ ದಿನವೂ ಆಗಿದೆ ಎಂದರು.
ಆಹಾರ ಮತ್ತು ಸರಬರಾಜು ಇಲಾಖೆ ರಾಜ್ಯ ಖಾತೆ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಮಾತನಾಡಿ, ಆಹಾರ ಸಂಗ್ರಹಣೆ ಹಾಗೂ ವಿತರಣೆಯಲ್ಲಿನ ಲೋಪಗಳನ್ನು ಸರಿಪಡಿಸಿ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಆಹಾರ ಸಂಗ್ರಹಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಆಹಾರ ನಿಗಮದಿಂದ ಬ್ಲಾಕ್ (ತಾಲೂಕು) ಮಟ್ಟದಲ್ಲಿ ಸಂಗ್ರಹಲಯ ನಿರ್ಮಾಣ ಮಾಡಿದರೆ ಸಬರಾಜಿನಲ್ಲಿ ಸೋರಿಕೆಯನ್ನು‌ ತಡೆಗಟ್ಟಬಹುದಾಗಿದೆ ಎಂದರು.
ಆಹಾರ ಮತ್ತು ಸರಬರಾಜು ಇಲಾಖೆ ರಾಜ್ಯ ಖಾತೆ ಸಚಿವ ಅಶ್ವಿನಿ ಕುಮಾರ್ ಚೌಬೆ ಮಾತನಾಡಿ, ಸರ್ಕಾರ ಕೋವಿಡ್ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಒದಗಿಸಲಾಗಿದೆ. ಬಡವರಿಗಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹುಬ್ಬಳ್ಳಿ ವಿಭಾಗೀಯ ಕಾರ್ಯಾಲಯವನ್ನು 16 ತಿಂಗಳ ಕಾಲ ಮಿತಿಯೊಳಗೆ ನಿರ್ಮಿಸಲಾಗಿದೆ. ತಂಜಾವೂರಿನಲ್ಲಿ 1.36 ಕೋಟಿ ವೆಚ್ಚದಲ್ಲಿ ಮಾನವ ವಿಕಾಸದಿಂದ ಇಲ್ಲಿಯವರೆಗೆ ಬೆಳದು ಬಂದಿರುವ ಆಹಾರ ಧಾನ್ಯ ಹಾಗೂ ಪದ್ಧತಿಗಳ ಇತಿಹಾಸ ಸಾರುವ ಮೊದಲ ಆಹಾರ ವಸ್ತು ಸಂಗ್ರಹಾಲಯ ನಿರ್ಮಿಸಲಾಗಿದೆ ಎಂದರು.
ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅತೀಶ್ ಚಂದ್ರ, ಕಾರ್ಯನಿರ್ವಾಹಕ ನಿರ್ದೇಶಕ ರವೀಂದ್ರ ಅಗರವಾಲ್, ಕರ್ನಾಟಕ ರಾಜ್ಯ ಪ್ರಧಾನ ವ್ಯಸ್ಥಾಪಕ ಜಿ.ನರಸಿಂಹರಾಜು ಮೊದಲಾದವರು ಉಪಸ್ಥಿತರಿದ್ದರು.
ಭಾರತೀಯ ಆಹಾರ ನಿಗಮವು ಬೆಂಗಳೂರಿನ ಪ್ರಾದೇಶಿಕ ಕಚೇರಿ ಸೇರಿದಂತೆ 5 ವಿಭಾಗೀಯ ಕಚೇರಿಗಳನ್ನು ಕರ್ನಾಟಕ ರಾಜ್ಯದಲ್ಲಿ ಹೊಂದಿದೆ. ಹುಬ್ಬಳ್ಳಿ, ರಾಯಚೂರು, ಶಿವಮೊಗ್ಗ, ಮೈಸೂರು, ಮಂಗಳೂರಿನಲ್ಲಿ ವಿಭಾಗೀಯ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಮುಖ ಸುದ್ದಿ :-   ದರ್ಶನ, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

ನೂತನ ಕಟ್ಟದ ವಿಶೇಷತೆ…
1971 ರಲ್ಲಿ ಭಾರತೀಯ ಆಹಾರ ನಿಗಮದ ವಿಭಾಗೀಯ ಕಚೇರಿಯನ್ನು ಹುಬ್ಬಳ್ಳಿಯಲ್ಲಿ ಆರಂಭಿಸಲಾಯಿತು. ಬಾಡಿಗೆ ಕಟ್ಟಡದಲ್ಲಿ ವಿಭಾಗೀಯ ಕಚೇರಿ ಕಾರ್ಯಾಚರಣೆ ನಡೆಸುತ್ತಿತ್ತು. ಹುಬ್ಬಳ್ಳಿ ಉಣಕಲ್ ಬಳಿ ಇರುವ ಭಾರತೀಯ ಆಹಾರ ನಿಗಮದ ಉಗ್ರಾಣಗಳ ಆವರಣದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ 1.8 ಕೋಟಿ ವೆಚ್ಚದಲ್ಲಿ 18 ಜೂನ್ 2020 ರಂದು ಭೂಮಿಪೂಜೆ ನೆರವೇರಿಸಲಾಗಿತ್ತು.
ನೂತನ ಕಟ್ಟಡವು ಅಗತ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಲು ಸ್ಥಳಾವಕಾಶ ಹೊಂದಿದೆ. ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯ, ರೆಕಾರ್ಡ್ ರೂಮ್, ಕ್ಯಾಂಟೀನ್, ಪವರ್ ಬ್ಯಾಕಪ್ ಸೌಲಭ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಆಡಿಟೋರಿಯಂ ಒಳಗೊಂಡಿದೆ.
ಹುಬ್ಬಳ್ಳಿಯ ವಿಭಾಗೀಯ ಕಚೇರಿ ಉತ್ತರ ಕರ್ನಾಟಕ ಭಾಗದ 7 ಕಂದಾಯ ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿಯನ್ನು ಹೊಂದಿದೆ. 2.6 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣ ಜಾಲದ ಮೂಲಕ ಆಹಾರ ಪೂರೈಕೆಯನ್ನು ಮೇಲ್ವಿಚಾರಣೆ ನಿರ್ವಹಿಸುತ್ತಿದೆ. ರಾಜ್ಯದ ಶೇ.30 ರಷ್ಟು ಪಡಿತರ ಚೀಟಿದಾರರು ಮತ್ತು ಶೇ. 25 ರಷ್ಟು ಪಡಿತರ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುತ್ತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement