ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ: ಡಾ. ಅಜಿತ ಪ್ರಸಾದ

ಧಾರವಾಡ: ವಿದ್ಯೆ, ವಿದ್ಯಾಭ್ಯಾಸ, ವಿದ್ಯಾರ್ಥಿ, ಅಧ್ಯಾಪಕ, ವಿದ್ಯಾ ಸಂಸ್ಥೆಗಳು ಇವುಗಳು ಮಾನವ ಸಮಾಜದ ಸಂಸ್ಕೃತಿ, ಸಮೃದ್ಧಿ, ಪ್ರಗತಿ, ಉನ್ನತಿಗಳನ್ನು ನಿರ್ಧರಿಸುವ ಶಬ್ದಗಳು, ವ್ಯಕ್ತಿಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶಿಕ್ಷಣವೊಂದೇ ಮಾರ್ಗ ಎಂದು ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದ ಹೇಳಿದರು.
ಅವರು ಧಾರವಾಡದ ವಿದ್ಯಾಗಿರಿಯ ಸನ್ನಿಧಿ ಕಲಾಕ್ಷೇತ್ರದಲ್ಲಿ ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ದೀಕ್ಷಾಭೋದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿನ್ನಲೆಯಲ್ಲಿ ಯಾವುದು ನಿಜವಾದ ಶಿಕ್ಷಣ? ಸಂಪೂರ್ಣ ಶಿಕ್ಷಣವೆಂದರೇನು? ಈ ಬಗ್ಗೆ ಚಿಂತನೆ ಅವಶ್ಯ. ಈ ನಿಟ್ಟಿನಲ್ಲಿ ಈ ದಿಕ್ಷಾ ಭೋಧನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಓರ್ವ ವ್ಯಕ್ತಿ ಶಾಲಾ ಕಾಲೇಜುಗಳ ಮೆಟ್ಟಿಲುಗಳನ್ನು ಹತ್ತಿ ಇಳಿದು, ಕೆಲವಾರು ವರುಷಗಳನ್ನು ಅಲ್ಲಿ ಕಳೆದನೆಂದ ಮಾತ್ರಕ್ಕೆ ಅದು ಶಿಕ್ಷಣವೆನಿಸಲಾರದು. ಯಾಕೆಂದರೆ ನಿಜವಾದ ದೃಷ್ಟಿಯಲ್ಲಿ ನೋಡಿದರೆ ಈ ಜಗತ್ತೇ ಒಂದು ಪಾಠಶಾಲೆ, ಅನುಭವವೇ ಗುರು. ಇಡೀ ಜೀವನಾವಧಿಯ ಶಿಕ್ಷಣದ ಅವಧಿ ಎಂದು ಅವರು ಹೇಳಿದರು.
ಕಲೆ, ಸಾಹಿತ್ಯದಲ್ಲಿ ಅಭಿರುಚಿಯಿರಲಿ, ಆದರ್ಶ ವಿದ್ಯಾರ್ಥಿಯಾದವನು ತನ್ನ ವಿದ್ಯಾಭ್ಯಾಸದ ಹೊರತಾಗಿ ಕ್ರೀಡೆ, ಕಲೆ ಮತ್ತು ಸಾಹಿತ್ಯದಲ್ಲೂ ಹೆಚ್ಚಿನ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ತನ್ನೊಳಗೆ ಸುಪ್ತವಾಗಿರುವ ಪ್ರತಿಭೆಗಳನ್ನು ಪ್ರಕಟಿಸಲು ಅವಕಾಶ ಬಂದಾಗ ಹಿಂಜರಿಯಬಾರದು. ಕ್ರೀಡೆಗಳಿಂದ ಶರೀರವೂ ಬಲಿಷ್ಠವಾಗುವುದರ ಜೊತೆ ಮನೋವಿಕಾಸವೂ ಆಗುತ್ತದೆ ಮತ್ತು ದೃಷ್ಟಿಕೋನವೂ ವಿಶಾಲವಾಗುತ್ತದೆ. ಅಂತೆಯೇ ಜೀವನದಲ್ಲಿ ಸೋಲು ಗೆಲುವುಗಳನ್ನು ಏಕ ರೂಪದಲ್ಲಿ ಸ್ವೀಕರಿಸುವ ಆಂತರಿಕ ಶಕ್ತಿಯೂ ಬೆಳೆಯುತ್ತದೆ. ನಮ್ಮ ದೇಶದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಮತ್ತು ಒಲವು ಆದರ್ಶ ವಿದ್ಯಾರ್ಥಿಯಲ್ಲಿರುತ್ತದೆ. ಜೀವನದಲ್ಲಿ ಮೌಲ್ಯಗಳಿಗೆ ಅಗ್ರಸ್ಥಾನವಿರಲಿ, ವಿನಯವು ವಿದ್ಯೆಗೆ ಹೇಗೆ ಭೂಷಣವೋ, ಮೌಲ್ಯಗಳು ಜೀವನಕ್ಕೆ ಕಳಶಪ್ರಾಯವಾಗಿರುತ್ತದೆ. ಉತ್ತಮ ಆಹಾರ ಅಭ್ಯಾಸಗಳಿಂದ ಆರೋಗ್ಯವಂತ ದೇಹವನು ಬೆಳೆಸಿದಂತೆ ಉತ್ತಮ ವಿಚಾರಧಾರೆಗಳಿಂದ ಜ್ಞಾನಾರ್ಜನೆಯಿಂದ ಮನಸ್ಸನ್ನು ಬೆಳೆಸಬೇಕು ಹಾಗೂ ಪ್ರೀತಿ ಕರುಣೆಗಳಿಂದ ಹೃದಯವಂತರಾಗುವುದು ಆದರ್ಶ ವಿದ್ಯಾರ್ಥಿಗಳ ಗುರಿಯಾಗಬೇಕು. ಗುಣ, ನಡತೆ, ಸಚ್ಚಾರಿತ್ರ‍್ಯ ಹಾಗೂ ಉತ್ತಮ ವರ್ತನೆಯಿಂದ ಮಾತ್ರ ನಾವು ಜನರನ್ನು ಆಕರ್ಷಿಸಬಲ್ಲೆವು ಹಾಗೂ ಗೆಲ್ಲಬಲ್ಲೆವು ಎಂದು ಹೇಳಿದರು.
ನಮ್ಮ ಶಿಕ್ಷಣ ವ್ಯವಸ್ಥೆ ಅಕ್ಷರಸ್ಥರನ್ನು ಪದವೀಧರರನ್ನು ಸೃಷ್ಟಿಸುತ್ತಿದೆಯೇ ಹೊರತು ನಿಜವಾದ ಶಿಕ್ಷಿತರನ್ನಲ್ಲ. ಮೌಲ್ಯಾಧಾರಿತ ಸಂಪೂರ್ಣ ಶಿಕ್ಷಣವೊಂದೇ ಸಮಾಜದ ಮತ್ತು ದೇಶದ ಉನ್ನತಿಗೆ ಮೂಲಾಧಾರ. ನಿಜವಾದ ಶಿಕ್ಷಣ ನಮಗೆ ಬದುಕುವುದನ್ನು ಕಲಿಸಬೇಕು. ವ್ಯಕ್ತಿಯನ್ನು ಜ್ವಲಂತ ರಾಷ್ಟ್ರ ಪ್ರಜ್ಞೆಯುಳ್ಳ ಸುಸಂಸ್ಕೃತ ನಾಗರೀಕನನ್ನಾಗಿ ಮಾಡುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿರಬೇಕು. ಈ ರಈತಿಯ ಶಿಕ್ಷಣ ವನ್ನು ನಮ್ಮ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನೀಡಲಾಗುತ್ತದೆ ಎಂದು ಹೇಳಿದರು.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಅಭಿಮನ್ಯು ಅಕಾಡೆಮಿಯ ಶ್ರೀ ಅರ್ಜುನ್ ದೇವಯ್ಯ ಅವರು ಈ ದೀಕ್ಷಾಬೋಧ ಕಾರ್ಯಕ್ರಮದಲ್ಲಿ ಎರಡು ದಿನದ ವ್ಯಕ್ತಿತ್ವ ವಿಕಸನದ ಶಿಬಿರವನ್ನು ನಡೆಸಿಕೊಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ಸೂರಜ್ ಜೈನ್ ಸ್ವಾಗತಿಸಿದರು. ಮಹಿಮಾ ಭಟ್ ನಿರೂಪಿಸಿದರು. ವಿವೇಕ ಲಕ್ಷ್ಮೇಶ್ವರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement