ಪುನೀತ್‌ ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊರುತ್ತೇನೆ, ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ: ನಟ ವಿಶಾಲ್‌

ಬೆಂಗಳೂರು: ಪುನೀತ್‌ ರಾಜ್‌ಕುಮಾರ್‌ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಮೊದಲೇ ಹೇಳಿದ್ದೆ. ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ತಮಿಳು ನಟ ವಿಶಾಲ್‌ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ನಡೆದ ಪುನೀತ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುನೀತ್ ನಮ್ಮನ್ನು ಆಗಲಿದ್ದು ಬೇಸರ ತರಿಸಿದೆ. ಪುನೀತ್ ನನ್ನ ಮಿತ್ರ, ಅವರು ಉತ್ತಮ ಮನುಷ್ಯ. ನನಗೆ ಪುನೀತ್ ದೊಡ್ಡಣ್ಣನಂತೆ. ಅವರು ಎಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದರು.
ಪುನೀತ್ ನನ್ನೊಂದಿಗೆ ಸದಾ ಒಳ್ಳೆ ವಿಷಯಗಳನ್ನು ಚರ್ಚೆ ಮಾಡುತ್ತಿದ್ದರು. ಪುನೀತ್ ತಾವು ಮಾಡಿದ ಕೆಲಸವನ್ನು ಯಾರಿಗೂ ಹೇಳಲು ಇಷ್ಟಪಡುತ್ತಿರಲಿಲ್ಲ. ಅವರ ಮಾನವೀಯ ಗುಣ, ಕೆಲಸ ಎಲ್ಲರೂ ಮೆಚ್ಚುತ್ತಾರೆ. ಅವರ ಕೆಲಸ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅವರು ಮೃತಪಟ್ಟ ನಂತರ ನಿಮ್ಮ ಕಾರ್ಯಗಳ ಬಗ್ಗೆ ಇಡೀ ದೇಶಕ್ಕೆ ತಿಳಿಯಿತು. ಅವರ ಕೆಲಸಗಳನ್ನು ಭಾರತೀಯ ಚಿತ್ರರಂಗ ಸಾವಿರ ವರ್ಷ ನೆನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪುನೀತ್‌ ಅವರು ಓದಿಸುತ್ತಿದ್ದ ಮಕ್ಕಳ ಜವಬ್ದಾರಿ ಇದೆ. ನಾನು ಈಗಾಗಲೇ ಆ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಬ್ದಾರಿ ವಹಿಸಿಕೊಂಡಿರುವ ಬಗ್ಗೆ ಹೇಳಿದ್ದೇನೆ. ಅದನ್ನು ಉಳಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ತಾವು ಮನೆ ಕಟ್ಟುವ ಸಲುವಾಗಿ ಕೂಡಿಟ್ಟಿರುವ ಹಣದಲ್ಲಿ ಈ ಸಮಾಜಸೇವೆಯನ್ನು ಮಾಡುವುದಾಗಿ ವಿಶಾಲ್​ ತಿಳಿಸಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪುನೀತ್​ ಕುಟುಂಬಸ್ಥರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗಿ ಆಗಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಎಲ್ಲರೂ ಹಾಜರಿದ್ದು, ಅಪ್ಪುಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಕೇವಲ ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿತ್ತು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement