ಆಸ್ಪತ್ರೆಗೆ ಪ್ರವೇಶಿಸಿ ಎಸ್ಕಲೇಟರ್ ಮೇಲೆ ಏರಿ ಎರಡನೇ ಮಹಡಿಗೆ ನಡೆದ ಗಾಯಗೊಂಡ ಜಿಂಕೆ..!.. ವೀಕ್ಷಿಸಿ

ಗಾಯಗೊಂಡ ಜಿಂಕೆಯೊಂದು ವೇಗವಾಗಿ ಓಡಿ ಬಂದು ಆಸ್ಪತ್ರೆಯ ಎಸ್ಕಲೇಟರ್ ಏರಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಅಮೆರಿಕದ ಲೂಸಿಯಾನಾದ ಆಸ್ಪತ್ರೆಯಲ್ಲಿ ನಡೆದಿದೆ.
ಆಸ್ಪತ್ರೆಯ ಬಾಗಿಲು ತೆರೆದಿತ್ತು, ಜನರೆಲ್ಲಾ ಓಡಾಡುತ್ತಿದ್ದರು. ಆಗ ಹೊರಗಡೆಯಿಂದ ಓಡಿ ಬಂದ ಜಿಂಕೆ ಸೀದಾ ಎಸ್ಕಲೇಟರ್ (Escalator) ಏರುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆನ್​ಲೈನ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಲೂಸಿಯಾನದ ಬ್ಯಾಟನ್ ರೂಜ್‌ನಲ್ಲಿರುವ ಅವರ್ ಲೇಡಿ ಆಫ್ ದಿ ಲೇಕ್ ಹಾಸ್ಪಿಟಲ್‌ ತೆರೆದ ಬಾಗಿಲಿನ ಮೂಲಕ ಜಿಂಕೆ ಪ್ರವೇಶಿಸುವುದನ್ನು ತೋರಿಸಿದೆ, ಅದು ಜಾರು ನೆಲದ ಮೇಲೆ ಜಾರಿ ಬಿದ್ದಿದೆ. ನಂತರ ಎದ್ದು ಎರಡನೇ ಮಹಡಿಗೆ ಎಸ್ಕಲೇಟರ್‌ನಲ್ಲಿ ಸಾಗುತ್ತಿರುವುದನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಮತ್ತು ಸಂದರ್ಶಕರು ಕ್ಷಣಕಾಲ ಗಾಬರಿಗೊಂಡರು.
ಜಿಂಕೆ ಎರಡನೇ ಮಹಡಿ ತಲುಪುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಮತ್ತು ಅಲ್ಲಿದ್ದವರು ಜಿಂಕೆಯನ್ನು ಹಿಡಿದಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಜಿಂಕೆಯನ್ನು ಮಲಗಿಸಿ ಲೂಯಿಸಿಯಾನ ವನ್ಯಜೀವಿ ಇಲಾಖೆಗೆ ವಿಷಯ ತಿಳಿಸಲಾಗಿದೆ.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ ಅದನ್ನು ಸ್ಟ್ರೆಚರ್‌ ಮೇಲೆ ಮಲಗಿಸಿ ಲೂಯಿಸಿಯಾನ ವನ್ಯಜೀವಿ ಮತ್ತು ಮೀನುಗಾರಿಕೆ ಇಲಾಖೆ ಟ್ರಕ್‌ಗೆ ಸಾಗಿಸಲಾಯಿತು.

ನಮ್ಮ ತಂಡದ ಸದಸ್ಯರು ಯಾವಾಗಲೂ ಅನಿರೀಕ್ಷಿತಕ್ಕೆ ಸಿದ್ಧರಾಗಿರುತ್ತಾರೆ. ಲೂಯಿಸಿಯಾನ ವನ್ಯಜೀವಿ ಮತ್ತು ಮೀನುಗಾರಿಕೆ ಇಲಾಖೆ ತಕ್ಷಣವೇ ಪ್ರತಿಕ್ರಿಯಿಸಿ ಪ್ರಾಣಿಯನ್ನು ಒಯ್ಯಲು ಸಹಾಯ ಮಾಡಿದೆ. ರೋಗಿಗಳ ಆರೈಕೆಗೆ ಅಡ್ಡಿಯಾಗಿಲ್ಲ ಮತ್ತು ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ. ಆಸ್ಪತ್ರೆಯ ಹತ್ತಿರದಲ್ಲಿಯೇ ರಸ್ತೆಯಲ್ಲಿ ಕಾರು ಜಿಂಕೆಗೆ ಡಿಕ್ಕಿ ಹೊಡೆದಿದೆ. ಸಣ್ಣ ಅಪಘಾತ ಸಂಭವಿಸಿದೆ. ಹಾಗಾಗಿ ಜಿಂಕೆ ಹೆದರಿ ವೇಗವಾಗಿ ಓಡಿ ಬಂದಿದೆ ಎಂದು ವನ್ಯಜೀವಿ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement