ಭೋಪಾಲ್ : ಕೊರೊನಾ ವೈರಸ್ ಸೋಂಕಿನ ವಿರುದ್ಧ ಲಸಿಕೆ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಆದರೆ ಬಹುತೇಕ ರಾಜ್ಯಗಳಲ್ಲಿನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದರ ವೇಗ ಹೆಚ್ಚಿಸಲು ಸರ್ಕಾರಗಳು ಕಸರತ್ತು ನಡೆಸುತ್ತಿದ್ದು ಈಗ ಮಧ್ಯಪ್ರದೇಶ ರಾಜ್ಯ ಕೋವಿಡ್ ಲಸಿಕೆ ಪಡೆಯದವರಿಗೆ ಪಡಿತರ ಸಾಮಗ್ರಿ ನೀಡದಿರಲು ನಿರ್ಧರಿಸಿದೆ.
ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಆದೇಶವನ್ನು ಹೊರಡಿಸಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳು ಕೋವಿಡ್ -19 ಲಸಿಕೆ ಪುರಾವೆ ಇಲ್ಲದೆ ಸಬ್ಸಿಡಿ ಪಡಿತರವನ್ನು ಪಡೆಯುವುದಿಲ್ಲ, ವೈರಸ್ ರೋಗದ ವಿರುದ್ಧ ಲಸಿಕೆ ಹಾಕಲು ಹಿಂಜರಿಯುವವರನ್ನು ಮನವೊಲಿಸುವ ಗುರಿಯನ್ನು ಹೊಂದಿದೆ. ನವೆಂಬರ್ 8 ರಂದು ಎಲ್ಲಾ ಜಿಲ್ಲಾ ನಾಗರಿಕ ಸರಬರಾಜು ಅಧಿಕಾರಿಗಳಿಗೆ ಬಿಡುಗಡೆ ಮಾಡಲಾದ ಆದೇಶವನ್ನು ಮಂಗಳವಾರ ಸಾರ್ವಜನಿಕಗೊಳಿಸಲಾಗಿದೆ.
ಆದೇಶದ ಪ್ರಕಾರ, ಕೋವಿಡ್ -19 ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯಲು ವಿಫಲವಾದರೆ ಫಲಾನುಭವಿಗಳು ಡಿಸೆಂಬರ್ 31 ರ ನಂತರ ಪಡಿತರವನ್ನು ಪಡೆಯುವುದಿಲ್ಲ. “ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಂಗಡಿಯವನು ಡಿಸೆಂಬರ್ 31 ರೊಳಗೆ 1.15 ಕೋಟಿ ಕುಟುಂಬಗಳ ಎಲ್ಲಾ ಅರ್ಹ ಸದಸ್ಯರಿಗೆ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆಯೇ ಎಂಬುದನ್ನು ಅಂಗಡಿಕಾರರು ಖಚಿತಪಡಿಸಿಕೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ
ಮಧ್ಯಪ್ರದೇಶದಲ್ಲಿ ಜನರು ಕೋವಿಡ್ ಎರಡನೇ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಅನೇಕರು ಲಸಿಕೆಯ ಮೊದಲನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ. ಹೀಗಾಗಿಯೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಫಲಾನುಭವಿಗಳು ಕೊರೊನಾ ಲಸಿಕೆಯನ್ನು ಪಡೆಯದೇ ಸಬ್ಸಿಡಿ ಪಡಿತರ ಪಡೆಯುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆಗಲಾದರೂ ಜನರು ಲಸಿಕೆ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ.
ಈಗಾಗಲೇ ಪಡಿತರ ಅಂಗಡಿಗಳಲ್ಲಿ ರಾಜ್ಯ ಸರಕಾರದ ಆದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ. ಸರ್ಕಾರದ ಆದೇಶದ ಪ್ರಕಾರ ಡಿಸೆಂಬರ್ ೩೧ರ ಒಳಗಾಗಿ ಎಲ್ಲ ಕುಟುಂಬಗಳು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕಾಗಿದೆ.
ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಪಡೆಯುವ ಕುಟುಂಬಗಳು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡೇ ಪಡಿತರ ನೀಡುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಕೊರೊನಾ ಲಸಿಕೆ ಪಡೆಯದ ಕುಟುಂಬಗಳ ಮಾಹಿತಿಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ವಾರಕ್ಕೊಮ್ಮೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆಯ ಕುರಿತು ಅಭಿಯಾನ ನಡೆಯುತ್ತಿದೆ. ಈಗಾಗಲೇ ನೂರು ಕೋಟಿಗೂ ಅಧಿಕ ಮಂದಿ ಕೊರೊನಾ ಮೊದಲ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದೀಗ ಶೇಕಡಾ ನೂರರಷ್ಟು ಲಸಿಕೆ ನೀಡುವ ಸಲುವಾಗಿ ಕೇಂದ್ರ, ರಾಜ್ಯ ಸರಕಾರಗಳು ಶತಪ್ರಯತ್ನವನ್ನು ನಡೆಸುತ್ತಿವೆ. ಒಟ್ಟಿನಲ್ಲಿ ಮಧ್ಯಪ್ರದೇಶ ಸರಕಾರ ಜಾರಿಗೆ ತಂದಿರುವ ಹೊಸ ಕಾನೂನು ಇದೀಗ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.
.


ನಿಮ್ಮ ಕಾಮೆಂಟ್ ಬರೆಯಿರಿ