ಪತ್ನಿಗೆ ಮಾಡಿದ ಅವಮಾನ ಸಹಿಸಲ್ಲ ..ಮತ್ತೆ ಸಿಎಂ ಆಗುವವರೆಗೂ ವಿಧಾಸಭೆಗೆ ಹೋಗಲ್ಲ ಎಂದು ಕಣ್ಣೀರು ಹಾಕಿದ ಚಂದ್ರಬಾಬು ನಾಯ್ಡು

ಅಮರಾವತಿ: ನವೆಂಬರ್ 19, ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರವೇ ಆಂಧ್ರ ಪ್ರದೇಶ ವಿಧಾನಸಭೆಗೆ ಮತ್ತೆ ಕಾಲಿಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಎರಡನೇ ದಿನದಂದು, ಆಡಳಿತಾರೂಢ ವೈಎಸ್‌ಆರ್‌ಸಿಪಿ ಸದಸ್ಯರಿಂದ ತಾವು ಎದುರಿಸುತ್ತಿರುವ ನಿರಂತರ ಅವಮಾನದಿಂದ ನೋವಾಗಿದೆ ಎಂದು ಪ್ರತಿಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹೇಳಿದರು. ”
ಕಳೆದ ಎರಡೂವರೆ ವರ್ಷಗಳಿಂದ, ನಾನು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ ಆದರೆ ಶಾಂತವಾಗಿದ್ದೇನೆ. ಇಂದು ನನ್ನ ಹೆಂಡತಿ ಭುವನೇಶ್ವರಿ ಅವರನ್ನು ಕೂಡ ವಿಧಾನಸಭೆಯಲ್ಲಿ ಅವಮಾನ ಮಾಡಲಾಗಿದೆ. ನಾನು ಹಿಂದೆಂದಿಗೂ ಇಂಥ ಅವಮಾನ ಅನುಭವಿಸಿರಲಿಲ್ಲ. ನಾನು ಯಾವಾಗಲೂ ಗೌರವಕ್ಕಾಗಿ ಬದುಕಿದ್ದೇನೆ. ನಾನು ಇನ್ನು ಮುಂದೆ ಇಂಥ ಅವಮಾನ ಸಹಿಸಲಾರೆ” ಎಂದು ನಾಯ್ಡು ಹೇಳಿದರು.
ಮಾತು ಮುಂದುವರಿಸಿದ ಅವರು, ನಾಯ್ಡು ಅವರ ಮಾತು ನಾಟಕ ಎಂದು ಆಡಳಿತ ಪಕ್ಷದ ಸದಸ್ಯರು ಹೇಳುತ್ತಿದ್ದಂತೆಯೇ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಮೈಕ್ ಕಟ್ ಮಾಡಿದರು.
ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ನಾಯ್ಡು, ವೈಎಸ್‌ಆರ್‌ಸಿಪಿಯಿಂದ ತಮಗಾದ ಅವಮಾನದ ಬಗ್ಗೆ ಮಾತನಾಡುತ್ತಾ ವಾಗ್ದಾಳಿ ನಡೆಸಿದರು. “ನನ್ನ ರಾಜಕೀಯ ಜೀವನದಲ್ಲಿ ನಾನು ಈ ರೀತಿಯ ಅವಮಾನಕ್ಕೆ ಒಳಗಾಗಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ವೈಎಸ್‌ಆರ್‌ಸಿಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ರೀತಿಯಲ್ಲಿ ಅವಮಾನ ಮಾಡಲಾಗಿದೆ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿರುಕುಳ ಮತ್ತು ಜೈಲು ಶಿಕ್ಷೆ ವಿಧಿಸಲಾಗಿದೆ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ನಮ್ಮನ್ನು ಅವಮಾನಿಸಲಾಗಿದೆ ಮತ್ತು ನಾವು ಸಹಿಸಿಕೊಂಡಿದ್ದೇವೆ ಎಂದು ಅವರು ಹೇಳಿದರು. ಇಂದು ವಿಧಾನಸಭೆಯಲ್ಲಿ ಅವರು ನನ್ನ ಹೆಂಡತಿಯನ್ನೂ ಈ ಕೊಳಕು ರಾಜಕೀಯಕ್ಕೆ ಎಳೆದುತಂದು ಚಾರಿತ್ರ್ಯಹನನ ಮಾಡಿದ್ದಾರೆ ಎಂದು ಹೇಳುತ್ತ ಅವರು ಕಣ್ಣೀರು ಹಾಕಿದ್ದಾರೆ. ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕರು ಕೆಟ್ಟ ಪದ ಬಳಸಿ ನಿಂದಿಸುತ್ತಾರೆ. ತಮ್ಮ ವಿರುದ್ಧ ಹೊಸು ಭಾಷೆ ಬಳಸುತ್ತಾರೆ, ನಿಂದಿಸುತ್ತಾರೆ ಎಂದು ಹೇಳುತ್ತ ಕಣ್ಣೀರು ಹಾಕಿದ್ದಾರೆ.
ಕೃಷಿ ಕ್ಷೇತ್ರದ ಕುರಿತು ನಡೆದ ಕಿರು ಚರ್ಚೆಯಲ್ಲಿ ಸದನದಲ್ಲಿ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದ ನಂತರ ಮಾಜಿ ಮುಖ್ಯಮಂತ್ರಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ, ಅವರು ತಮ್ಮ ಚೇಂಬರ್‌ನಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದರು, ಅಲ್ಲಿಯೂ ಅವರು ಬಿಕ್ಕಿ ಬಿಕ್ಕಿ ಅತ್ತರು ಎಂದು ವರದಿಯಾಗಿದೆ. ದಿಗ್ಭ್ರಮೆಗೊಂಡ ಟಿಡಿಪಿ ಶಾಸಕರು ನಾಯ್ಡು ಅವರನ್ನು ಸಮಾಧಾನಪಡಿಸಿದ ನಂತರ ಅವರೆಲ್ಲರೂ ಮತ್ತೆ ಸದನಕ್ಕೆ ಬಂದರು. ನಂತರ ನಾಯ್ಡು ಅವರು “ನಾನು ಅಧಿಕಾರಕ್ಕೆ ಮರಳುವವರೆಗೆ” ಸದನಕ್ಕೆ ಹೋಗುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ನಾಯ್ಡು ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ತಅನು ರಾಜ್ಯದಲ್ಲಿ ಭಾರೀ ಮಳೆಯ ಬಗ್ಗೆ ಪರಿಶೀಲನಾ ಸಭೆಯ ನಂತರ ನಂತರವೇ ವಿಧಾನಸಭೆ ಪ್ರವೇಶಿಸಿದ್ದೇನೆ. ನಾನು ಸದನವನ್ನು ಪ್ರವೇಶಿಸುವ ವೇಳೆಗೆ ನಾಯ್ಡು ಭಾವನಾತ್ಮಕವಾಗಿ ಮಾತನಾಡುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸದನದಲ್ಲಿ ಸಂಬಂಧವಿಲ್ಲದ ವಿಷಯಗಳನ್ನು ಮಂಡಿಸುವ ಮೂಲಕ ವೈಎಸ್‌ಆರ್‌ಸಿಪಿ ನಾಯಕರನ್ನು ಪ್ರಚೋದಿಸಿದ್ದು ನಾಯ್ಡು ಅವರೇ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರೇ ಸದನದಲ್ಲಿ ವಾತಾವರಣವನ್ನು ಕೆರಳಿಸುತ್ತಾರೆ. ಸ್ವಾಭಾವಿಕವಾಗಿ ಆಡಳಿತ ಪಕ್ಷದ ನಾಯಕರು ಅದಕ್ಕೆ ಸ್ಪಂದಿಸುತ್ತಾರೆ. ನೀವು ಆರೋಪ ಮಾಡಿದಾಗ ವೈಎಸ್‌ಆರ್‌ಸಿಪಿ ನಾಯಕರು ವಂಗವೀಟಿ ಮೋಹನ ರಂಗ, ಮಾಧವ ರೆಡ್ಡಿ ಹತ್ಯೆ ಹಾಗೂ ಟಿಡಿಪಿ ಆಡಳಿತದಲ್ಲಿ ನಡೆದ ಮಲ್ಲೇಲ ಬಾಬ್ಜಿ ಸಾವಿನ ಬಗ್ಗೆಯೂ ಚರ್ಚೆ ನಡೆಸಬೇಕಿದೆ ಎಂದು ಪ್ರತ್ಯಾರೋಪ ಮಾಡಿದರು. ನಾಯ್ಡು ಅವರಿಂದ ಪ್ರಚೋದನೆಗೆ ಒಳಗಾಗಿದ್ದರಿಂದ ಅವರು ಹಾಗೆ ಹೇಳಿದ್ದಾರೆ ಎಂದು ಜಗನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement