ಆಂಧ್ರ ಪ್ರವಾಹ: ಇಬ್ಬರನ್ನು ಪಾರು ಮಾಡಿ ಜೀವ ಕಳೆದುಕೊಂಡ ಎಸ್‌ಡಿಆರ್‌ಎಫ್ ಸಿಬ್ಬಂದಿ

ನೆಲ್ಲೂರು: ಇಬ್ಬರ ಪ್ರಾಣ ಕಾಪಾಡಿದ ಆಂಧ್ರದ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್) ಕಾನ್ಸ್ಟೇಬಲ್ ಒಬ್ಬರು ರಕ್ಷಣಾ ಕಾರ್ಯಾಚರಣೆ ವೇಳೆ ಲೈಫ್ ಜಾಕೆಟ್ ಬೇರ್ಪಟ್ಟ ನಂತರ ಜಲಸಮಾಧಿಯಾದ ದುರಂತ ನಡೆದಿದೆ.
ಬುಚ್ಚಿರೆಡ್ಡಿಪಾಲೆಂ ಮಂಡಲದ ದಾಮರಮಡುಗು ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ದುರ್ದೈವಿ ಎಸ್‌ಡಿಆರ್‌ಎಫ್ ಪೇದೆಯನ್ನು ಕೆಲ್ಲ ಶ್ರೀನಿವಾಸ ರಾವ್ (30) ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಶನಿವಾರ ಬೆಳಿಗ್ಗೆ ದಾಮರಮಡುಗುನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಇಬ್ಬರನ್ನು ರಕ್ಷಿಸಲು ನಿಯೋಜಿಸಲಾದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಕ್ಕೆ ಕರೆ ಬಂದಿತ್ತು. ಆಗ ಕೆಲ್ಲ ಶ್ರೀನಿವಾಸ ರಾವ್ ಅವರನ್ನೊಳಗೊಂಡ ತಂಡವು ದೋಣಿಯಲ್ಲಿ ಗ್ರಾಮಕ್ಕೆ ಧಾವಿಸಿ ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ತಂದೆ ಮತ್ತು ಮಗನನ್ನು ರಕ್ಷಣಾ ಬೋಟ್‌ಗೆ ಕರೆತಂದಿದೆ. ಈ ವೇಳೆ , ರಾವ್ ಅವರು ದೋಣಿಗೆ ಇಳಿಯುತ್ತಿದ್ದಂತೆ ಅವರ ಲೈಫ್ ಜಾಕೆಟ್ ಕಳಚಿ ಬಿದ್ದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಅವರ ತಂಡದ ಇತರರು ಪ್ರಯತ್ನಪಟ್ಟರೂ ಉಳಿಸಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.
ಕೆಲ್ಲ ಶ್ರೀನಿವಾಸ ರಾವ್ ಅವರು ಪತ್ನಿ ಸುನೀತಾ ಮತ್ತು ಅವರ 18 ತಿಂಗಳ ಮಗ ಮೋಕ್ಷಜ್ಞ ಅವರನ್ನು ಅಗಲಿದ್ದಾರೆ. ಆಂಧ್ರಪ್ರದೇಶ ಪೊಲೀಸರು ಸಹೋದ್ಯೋಗಿಯನ್ನು ಪ್ರವಾಹಕ್ಕೆ ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಆಂಧ್ರ ಪೊಲೀಸ್ ಇಲಾಖೆ ಯಾವಾಗಲೂ ಕುಟುಂಬದ ಬೆಂಬಲಕ್ಕಿದೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಅತ್ಯುನ್ನತ ತ್ಯಾಗವನ್ನು ಸ್ಮರಿಸುತ್ತದೆ ಎಂದು ಟ್ವೀಟ್ ಮಾಡಿದೆ.

ಆಂಧ್ರಪ್ರದೇಶದ ವಿಧ್ವಂಸಕ ಪ್ರವಾಹದಲ್ಲಿ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 17 ಜನ ನಾಪತ್ತೆಯಾಗಿದ್ದಾರೆ. ಒಟ್ಟು 1,316 ಹಳ್ಳಿಗಳು ಮುಳುಗಿವೆ ಅಥವಾ ಪರಿಣಾಮ ಬೀರಿವೆ. 24,000 ಜನರು ಸಂತ್ರಸ್ತರಾಗಿದ್ದರೆ, 20,923 ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಶನಿವಾರ ಸಂಜೆ ವೇಳೆಗೆ ಅಧಿಕೃತ ಅಂದಾಜಿನ ಪ್ರಕಾರ, ಸುಮಾರು 488 ಮನೆಗಳು ಮುಳುಗಿವೆ. 1,549 ಮನೆಗಳು ಹಾನಿಗೊಳಗಾಗಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ