
ಹೊಸಪೇಟೆ: ಹಂಪಿ ಹೇಮಕೂಟದ ಕೊಟ್ಟೂರು ಸ್ವಾಮಿ ಮಠದ ಡಾ. ಸಂಗನಬಸವ ಸ್ವಾಮೀಜಿ (87 ವರ್ಷ) ಲಿಂಗೈಕ್ಯರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಉತ್ತರ ಕರ್ನಾಟಕದ ಹಿರಿಯ ವೀರಶೈವ ಲಿಂಗಾಯತ ಜಗದ್ಗುರುಗಳಾಗಿದ್ದ ಡಾ.ಸಂಗನ ಬಸವ ಮಹಾಸ್ವಾಮಿ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಅಪೋಲೊ ಅಸ್ಪತ್ರೆಯಲ್ಲಿ ದಾಖಲಾಗಿದ್ರು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ 5.30 ಕ್ಕೆ ಲಿಂಗೈಕ್ಯರಾಗಿದ್ದಾರೆ.
ಶಿಕ್ಷಣ ಸಂಸ್ಥೆಗಳ ಮೂಲಕ ತ್ರಿವಿಧ ದಾಸೋಹಿಯಾಗಿದ್ದ ಡಾ.ಸಂಗನ ಬಸವ ಮಹಾಸ್ವಾಮಿ 2004ರಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗಮಂದಿರದ ಅಧ್ಯಕ್ಷರಾಗಿದ್ದರು. ಹೊಸಪೇಟೆ ,ಬಳ್ಳಾರಿ, ಗದಗ ಬಾಗಲಕೋಟೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬಡವರಿಗೆ ಅನ್ನ ಹಾಗೂ ಅಕ್ಷರ ದಾಸೋಹ ನೀಡುತ್ತಿದ್ದರು. ಬಸವ ತತ್ವದ ಮೂಲ ದೀನದಲಿತರ ಕಲ್ಯಾಣಕ್ಕೆ ಶ್ರಮಿಸಿದ್ದ ಶ್ರೀಗಳು ಕಾವಿಧಾರಿಯಾಗಿ ಮಠಕ್ಕೆ ಸೀಮಿತವಾಗಿರದೆ ಜನಪರ ವಿಚಾರಧಾರೆಗಳನ್ನು ಹೊಂದಿದ್ದರು.
ಸಂಗನ ಬಸವ ಸ್ವಾಮೀಜಿ ಅವರ ಅವಧಿಯಲ್ಲೇ ಶಿವಯೋಗಮಂದಿರ ಶತಮಾನೋತ್ಸವ ಆಚರಿಸಿದೆ. ಸದ್ಯ ಶಿವಯೋಗಮಂದಿರಲ್ಲಿ 50 ಜನ ವಟುಗಳಿಗೆ ತರಬೇತಿ ನಡೆಯುತ್ತಿದೆ. ಸ್ವಾಮೀಜಿ ಪ್ರತ್ಯೇಕ ಲಿಂಗಾಯತ ಹೋರಾಟ ವಿರೋಧಿಸಿದ್ದರು. ಲಿಂಗಾಯತ ಪ್ರತ್ಯೇಕ ಹೋರಾಟಕ್ಕೆ ಪರ್ಯಾಯವಾಗಿ ಶಿವಯೋಗಮಂದಿರದಲ್ಲಿ ಗುರು ವಿರಕ್ತರ ಸಮಾವೇಶ ನಡೆಸಿದ್ದರು.
1972 ರಲ್ಲಿ ಬಳ್ಳಾರಿ- ಹೊಸಪೇಟೆ ಕೊಟ್ಟೂರು ಸ್ವಾಮಿ ಮಠದ ಅಧಿಕಾರ ವಹಿಸಿಕೊಂಡ ಡಾ.ಸಂಗನಬಸವ ಸ್ವಾಮೀಜಿ, 1987ರಲ್ಲಿ ಹಾಲಕೆರೆ ಅನ್ನದಾನೇಶ್ವರ ಮಠದ ಅಧಿಕಾರ ವಹಿಸಿಕೊಂಡರು. 9 ಬಸವ ಪುರಾಣಗಳ ಪ್ರತಿಪಾದಕರಾಗಿದ್ದ ಶ್ರೀಗಳು, ಈ ಮೂಲಕ ಸರ್ವಧರ್ಮಗಳ ಸಾಮೂಹಿಕ ವಿವಾಹಗಳನ್ನು ನೆರೆವೇರಿಸಿ, ಸಮಾಜದ ಅಭ್ಯುದಯಕ್ಕೆ ಸೇವೆ ಸಲ್ಲಿಸಿದ್ದಾರೆ. ಹರಿಜನ-ಗಿರಿಜನ ಓಣಿಗಳಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಹೊಸಪೇಟೆ, ಬಳ್ಳಾರಿ, ಬಾಗಲಕೋಟೆ, ಗದಗ ಮೊದಲಾದಡೆ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬಡವರಿಗೆ ಅನ್ನ ಹಾಗೂ ಅಕ್ಷರ ದಾಸೋಹ ಮಾಡಿದ್ದರು. ಮೂಲಕ ಸಮಾಜದ ಸೇವೆ ಸಲ್ಲಿಸಿದ್ದಾರೆ. ಸಮಾಜದ ಬಗ್ಗೆ ಕಳಕಳಿ ಹೊಂದಿದ್ದ ಶ್ರೀಗಳು ಹಲವಾರು ಸಮಾಜಪರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸ್ವಾಮೀಜಿ ಕನ್ನಡ, ಇಂಗ್ಲೀಷ್, ಸಂಸ್ಕೃತ ಭಾಷೆಗಳ ಜತೆಗೆ ಹಿಂದಿ ಭಾಷೆಯಲ್ಲಿಯೂ ಪ್ರಾವಿಣ್ಯರು.
ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಭಕ್ತರ ಅಪೇಕ್ಷೆಯಂತೆ ಇಳಕಲ್ ಗಡದ ಹಾಲಕೆರೆ ಮಠದಲ್ಲಿ ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಇಂದು ಶ್ರೀಗಳ ಅಂತ್ಯಕ್ರಿಯೆ ಕಾರ್ಯ ನಡೆಯಲಿದೆ.

ಸಿಎಂ ಬೊಮ್ಮಾಯಿ ಸಂತಾಪ:
ಡಾ. ಸಂಗನ ಬಸವ ಮಹಾಸ್ವಾಮಿಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಹಲವು ದಶಕಗಳ ಕಾಲ ಅವರು ಕನ್ನಡ ನಾಡು, ನುಡಿ, ಲಿಂಗಾಯತ ಧರ್ಮಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ನಿಧನದಿಂದ ಅಪಾರ ಭಕ್ತ ಸಮೂಹ ಅನಾಥವಾಗಿದೆ. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಭಕ್ತ ಸಮೂಹಕ್ಕೆ ನೀಡಲಿ ಎಂದು ಕೋರುತ್ತೇನೆ ಎಂದು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ